ADVERTISEMENT

ಜನಸಂಖ್ಯೆ: 2027ರ ವೇಳೆಗೆ ಚೀನಾ ಮೀರಿಸಲಿದೆ ಭಾರತ!

ವಿಶ್ವಸಂಸ್ಥೆಯ ಜನಸಂಖ್ಯಾ ವರದಿ

ಪಿಟಿಐ
Published 19 ಜೂನ್ 2019, 3:06 IST
Last Updated 19 ಜೂನ್ 2019, 3:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: 2027ರ ವೇಳೆಗೆ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿ, ವಿಶ್ವದ ಅತ್ಯಧಿಕ ಜನಸಂಖ್ಯೆಯ ದೇಶವಾಗುವ ನಿರೀಕ್ಷೆಯಿದೆ.

2050ರ ವೇಳೆಗೆ ದೇಶದ ಈಗಿನ ಜನಸಂಖ್ಯೆಗೆ ಇನ್ನೂ 27.30 ಕೋಟಿ ಜನರು ಸೇರ್ಪಡೆಗೊಳ್ಳುವ ಸಂಭವವಿದೆ ಎಂದು ಇತ್ತೀಚೆಗೆ ಪ್ರಕಟಗೊಂಡವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ. ‘ವಿಶ್ವ ಜನಸಂಖ್ಯಾ ನೋಟ 2019: ಮುಖ್ಯಾಂಶಗಳು’ ಕುರಿತ ವರದಿಯನ್ನು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಜನಸಂಖ್ಯಾ ವಿಭಾಗ ಪ್ರಕಟಿಸಿದೆ.

2050ರ ವೇಳೆಗೆ ವಿಶ್ವದ ಜನಸಂಖ್ಯೆಯು 200 ಕೋಟಿಯಷ್ಟು ಏರಿಕೆಯಾಗಿ 970 ಕೋಟಿ ಆಗಲಿದೆ ಎಂದು ವರದಿ ಅಂದಾಜು ಮಾಡಿದೆ. 2050ರ ವೇಳೆಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾದ ಜನಸಂಖ್ಯೆಯ ಅರ್ಧದಷ್ಟು ಏರಿಕೆಯು ವಿಶ್ವದ ಒಂಬತ್ತು ರಾಷ್ಟ್ರಗಳಲ್ಲಿ ಕಂಡುಬರಲಿದೆ. ಈ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿ ಇರಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ನೈಜೀರಿಯಾ, ಪಾಕಿಸ್ತಾನ, ಕಾಂಗೊ ಗಣರಾಜ್ಯ, ಇಥಿಯೋಪಿಯಾ, ತಾಂಜೇನಿಯಾ, ಇಂಡೋನೇಷ್ಯಾ, ಈಜಿಪ್ಟ್‌ ಮತ್ತು ಅಮೆರಿಕ ಉಳಿದ ಎಂಟು ರಾಷ್ಟ್ರಗಳಾಗಿವೆ.

ADVERTISEMENT

ಚೀನಾದ ಪ್ರಸ್ತುತ ಜನಸಂಖ್ಯೆಯು 143 ಕೋಟಿಯಾಗಿದ್ದು ಭಾರತದ ಜನಸಂಖ್ಯೆ 137 ಕೋಟಿ ಇದೆ. ಅತ್ಯಧಿಕ ಜನಸಂಖ್ಯೆಯ ರಾಷ್ಟ್ರಗಳಲ್ಲಿ ಇವೆರಡು ದೇಶಗಳು ದೀರ್ಘಕಾಲದಿಂದ ಮೊದಲೆರಡು ಸ್ಥಾನಗಳಲ್ಲಿವೆ. ವಿಶ್ವದ ಒಟ್ಟಾರೆ ಜನಸಂಖ್ಯೆಯಲ್ಲಿ ಇದು ಕ್ರಮವಾಗಿ ಶೇ 19 ಮತ್ತು ಶೇ 18ರಷ್ಟಾಗಿದೆ. ಜನಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿ ಅಮೆರಿಕ (32.90 ಕೋಟಿ) ಹಾಗೂ ನಾಲ್ಕನೇ ಸ್ಥಾನದಲ್ಲಿ ಇಂಡೊನೇಷ್ಯಾ (27.10 ಕೋಟಿ) ಇದೆ.

ಜನನ ಸಂಖ್ಯೆ ಕಡಿಮೆಯಾಗಿರುವುದು ಮತ್ತು ಜನರ ಜೀವಿತಾವಧಿ ಏರಿಕೆಯಾಗಿರುವ ಕಾರಣ ಅನೇಕ ರಾಷ್ಟ್ರಗಳಲ್ಲಿ ಜನರ ಸರಾಸರಿ ವಯಸ್ಸು ಏರಿಕೆಯಾಗುತ್ತಿದೆ. 2050ರ ವೇಳೆಗೆ ಜಗತ್ತಿನ ಆರು ಜನರಲ್ಲಿ ಒಬ್ಬರ ವಯಸ್ಸು 65 ವರ್ಷ ಆಗಿರಲಿದೆ (ಶೇ 16). ಪ್ರಸಕ್ತ 11 ಜನರಲ್ಲಿ ಒಬ್ಬರ ವಯಸ್ಸು 65ವರ್ಷ ಇದೆ (ಶೇ 9). ವಿಶ್ವದಲ್ಲಿ ಪ್ರಸಕ್ತ 14.30 ಕೋಟಿ ಜನರು 80 ವರ್ಷ ವಯಸ್ಸು ಮೀರಿದವರಿದ್ದು, 2050ರ ವೇಳೆಗೆ ಈ ಸಂಖ್ಯೆ ಮೂರು ಪಟ್ಟು ಹೆಚ್ಚಿ 42.60 ಕೋಟಿ ಆಗಲಿದೆ ಎಂದು ವರದಿ ತಿಳಿಸಿದೆ.

ಬಡ ರಾಷ್ಟ್ರಗಳಲ್ಲಿಯೇ ಜನಸಂಖ್ಯೆ ಏರಿಕೆ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ ಎಂದು ವರದಿ ಹೇಳಿದೆ. ಇದರಿಂದಾಗಿ ಆ ರಾಷ್ಟ್ರಗಳ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಹಸಿವು, ಅಪೌಷ್ಟಿಕತೆಯನ್ನು ನೀಗಿಸುವುದು, ಎಲ್ಲರಿಗೂ ಸಮಾನ ಆರೋಗ್ಯ ಸೇವೆ, ಶಿಕ್ಷಣ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವುದು ಈ ರಾಷ್ಟ್ರಗಳಿಗೆ ದೊಡ್ಡ ಸವಾಲಾಗಲಿದೆ.

ವಿಶ್ವದ 27 ರಾಷ್ಟ್ರಗಳಲ್ಲಿ ಜನನ ಸಂಖ್ಯೆ ಈಗಾಗಲೇ ಕಡಿಮೆ ಆಗಿದ್ದು, ಇವು 2010ರ ಬಳಿಕ ಜನಸಂಖ್ಯಾ ಇಳಿಕೆಯನ್ನು ದಾಖಲಿಸುತ್ತಿವೆ. 2019ರಿಂದ 2050ರೊಳಗಿನ ಅವಧಿಯಲ್ಲಿ ಚೀನಾದ ಜನಸಂಖ್ಯೆ 3.14 ಕೋಟಿಯಷ್ಟು (ಶೇ 2.2) ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.