ADVERTISEMENT

ಪಾಕ್‌ ಜೊತೆ ಮಾತುಕತೆ: ರಷ್ಯಾದಿಂದಲೂ ಒತ್ತಡ

ಸಂಘರ್ಷ ಶಮನ, ವಿಶ್ವಾಸ ವೃದ್ಧಿಗೆ ಉಭಯ ದೇಶಗಳು ಮುಂದಾಗಲಿ: ಮಾರಿಯಾ

​ಪ್ರಜಾವಾಣಿ ವಾರ್ತೆ
Published 17 ಮೇ 2025, 0:30 IST
Last Updated 17 ಮೇ 2025, 0:30 IST
ಮಾರಿಯಾ ಝಖರೋವಾ
ಮಾರಿಯಾ ಝಖರೋವಾ   

ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಂತರ ಭಾರತೀಯ ಪಡೆಗಳು ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿದ ನಂತರ ಉಭಯ ದೇಶಗಳ ಉಂಟಾಗಿರುವ ಉದ್ವಿಗ್ನತೆ ಪೂರ್ಣ ಶಮನವಾಗಿಲ್ಲ.

ಈ ಬೆಳವಣಿಗೆ ನಂತರ, ಪಾಕಿಸ್ತಾನದ ಜೊತೆಗಿನ ಮಾತುಕತೆಯನ್ನು ಮತ್ತೆ ಆರಂಭಿಸುವಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಲೇ ಬಂದಿದೆ. ಈಗ, ಮಿತ್ರ ರಾಷ್ಟ್ರವಾದ ರಷ್ಯಾ ಕೂಡ ಈ ಕುರಿತು ಭಾರತದ ಮೇಲೆ ಒತ್ತಡ ಹೇರಲು ಆರಂಭಿಸಿದೆ.

ಉಭಯ ದೇಶಗಳು ಗಡಿಯಾಚೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಮೇ 10ರಂದು ನಿಲ್ಲಿಸದ ಬೆನ್ನಲ್ಲೇ, ಪ್ರತಿಕ್ರಿಯಿಸಿದ್ದ ಚೀನಾ, ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಾತುಕತೆ ನಡೆಸಿ, ಪುನಃ ಸಂಘರ್ಷ ಉದ್ಭವಿಸದಂತೆ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದು ಚೀನಾ ಹೇಳಿತ್ತು.

ADVERTISEMENT

‘ಭಾರತ ಮತ್ತು ಪಾಕಿಸ್ತಾನ ಮಾತುಕತೆಗೆ ಮತ್ತೆ ಚಾಲನೆ ನೀಡಬೇಕು. ಉಭಯ ದೇಶಗಳ ನಡುವೆ ವಿಶ್ವಾಸ ವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂಬುದು ರಷ್ಯಾ ಹೇಳುತ್ತಲೇ ಬಂದಿದೆ’ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ವಕ್ತಾರೆ ಮಾರಿಯಾ ಝಖರೋವಾ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಕುರಿತಂತೆ ರಷ್ಯಾ ನಿಲುವು ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ 12 ವರ್ಷಗಳಿಂದ ಸ್ಥಗಿತಗೊಂಡಿರುವ ಮಾತುಕತೆಯನ್ನು ಮತ್ತೆ ಆರಂಭಿಸಲು ಭಾರತಕ್ಕೆ ಪಾಕಿಸ್ತಾನ ಮನವಿ ಮಾಡಿದೆ. ‘ಆಪರೇಷನ್‌ ಸಿಂಧೂರ’ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಸಂದರ್ಭದಲ್ಲಿಯೇ ಅಮೆರಿಕ ಮತ್ತು ರಷ್ಯಾ ಕೂಡ ಉಭಯ ದೇಶಗಳ ನಡುವೆ ನೇರ ಮಾತುಕತೆ ಮತ್ತೆ ಆರಂಭವಾಗಬೇಕು ಎಂಬುದಾಗಿ ಹೇಳುತ್ತಿರುವುದು ಗಮನಾರ್ಹ.

ಭಾರತದ ಜೊತೆ ಮಾತುಕತೆ ಆರಂಭಿಸುವುದಕ್ಕೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್ ಕೂಡ ಇಚ್ಛೆ ವ್ಯಕ್ತಪಡಿಸಿದ್ದರು.

ಮಾತುಕತೆ ಆರಂಭಕ್ಕೆ ಡಾರ್ ಕರೆ

ಇಸ್ಲಾಮಾಬಾದ್: ತಮ್ಮ ನಡುವಿನ ವಿವಾದಾತ್ಮಕ ವಿಷಯಗಳನ್ನು ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನ ಮಾತುಕತೆಗೆ ಮುಂದಾಗಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್‌ ಡಾರ್‌ ಕರೆ ನೀಡಿದ್ದಾರೆ. 

ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಭಯೋತ್ಪಾದನೆಯ ವಿಷಯದ ಬಗ್ಗೆ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾಗಿ ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ಸೆನೆಟ್‌ ಅನ್ನು ಉದ್ದೇಶಿಸಿ ಮಾತನಾಡಿದ ಡಾರ್, ‘ಭಾರತದ ಜತೆ ಮಾತುಕತೆ ನಡೆಸುತ್ತೇವೆ ಎಂದು ನಾವು ಜಗತ್ತಿಗೆ ತಿಳಿಸಿದ್ದೇವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.