ADVERTISEMENT

ಭಾರತ–ಪಾಕ್‌ ಯುದ್ಧ ನಿಲ್ಲಿಸಿದ್ದು ನಾವೇ, ಶಾಂತಿಯ ಪಿತಾಮಹ ಟ್ರಂಪ್‌: ರುಬಿಯೊ

ಪಿಟಿಐ
Published 8 ಆಗಸ್ಟ್ 2025, 14:01 IST
Last Updated 8 ಆಗಸ್ಟ್ 2025, 14:01 IST
<div class="paragraphs"><p>ಅಮೆರಿಕದ&nbsp;ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ</p></div>

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ

   

ರಾಯಿಟರ್ಸ್‌ ಚಿತ್ರ

ನ್ಯೂಯಾರ್ಕ್‌: ‘ಭಾರತ–ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಲು ಅಮೆರಿಕ ನೇರವಾಗಿ ಕಣಕ್ಕಿಳಿಯಿತು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.

ADVERTISEMENT

‘ಕದನ ವಿರಾಮ ಜಾರಿಗೆ ತರಲು ತಾನೇ ಕಾರಣ’ ಎಂದು  ಟ್ರಂಪ್‌ ಈಗಾಗಲೇ ಮೇ 10ರಿಂದ 25 ಬಾರಿ ಹೇಳಿದ್ದಾರೆ. ಇದೀಗ ರುಬಿಯೊ ಕೂಡ ಅಧ್ಯಕ್ಷರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಭಾರತ–ಪಾಕಿಸ್ತಾನ ಯುದ್ಧಕ್ಕೆ ಮುಂದಾದಾಗ ಅಮೆರಿಕ ನೇರವಾಗಿ ಕಣಕ್ಕಿಳಿಯಿತು. ಅಣ್ವಸ್ತ್ರ ಬಲ ಹೊಂದಿರುವ ನೆರೆಹೊರೆ ದೇಶಗಳ ನಡುವೆ ಟ್ರಂಪ್‌ ಅವರ ಪಾತ್ರದಿಂದ ಶಾಂತಿ ಸ್ಥಾಪನೆ ಸಾಧ್ಯವಾಯಿತು ಎಂದು  ಪ್ರತಿಪಾದಿಸಿದ್ದಾರೆ.

‘ಶಾಂತಿ ಸ್ಥಾಪನೆಗೆ ಟ್ರಂಪ್‌ ಬದ್ಧರಾಗಿದ್ದಾರೆ. ಅವರು ‘ಶಾಂತಿಯ ಪಿತಾಮಹ’ ಎಂದು ರುಬಿಯೊ ಅಮೆರಿಕದ ಇಡಬ್ಲ್ಯೂಟಿಎನ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಣ್ಣಿಸಿದ್ದಾರೆ.

ಕಾಂಬೋಡಿಯಾ–ಥಾಯ್ಲೆಂಡ್‌, ಅಜೆರ್‌ಬೈಜಾನ್‌ –ಅರ್ಮೆನಿಯಾ ಸೇರಿದಂತೆ ಜಗತ್ತಿನ ಹಲವು ದೇಶಗಳ ಮಧ್ಯದ ಸಂಘರ್ಷಗಳನ್ನು ಟ್ರಂಪ್‌ ಮಧ್ಯಪ್ರವೇಶಿಸಿ ಶಮನಗೊಳಿಸಿದ್ದಾರೆ ಎಂದು ರುಬಿಯೊ ಪಟ್ಟಿ ಮಾಡಿದ್ದಾರೆ. 70 ಲಕ್ಷ ಜನರ ಸಾವಿಗೆ ಕಾರಣವಾದ ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊ ಮತ್ತು ರವಾಂಡ ನಡುವೆ ಮೂರು ದಶಕಳಿಂದ ಮುಂದುವರಿದಿದ್ದ ಸಂಘರ್ಷವನ್ನು ಕೊನೆಗಾಣಿಸಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿಸುವಲ್ಲಿ ಅಮೆರಿಕ ಮಹತ್ವದ ಪಾತ್ರ ವಹಿಸಿತು ಎಂದು ಅವರು ಹೇಳಿದ್ದಾರೆ.

ಜಗತ್ತಿನ ಅತ್ಯಂತ ದೊಡ್ಡ ಸವಾಲಾದ  ಉಕ್ರೇನ್‌–ರಷ್ಯಾ ಯುದ್ಧ ನಿಲ್ಲಿಸುವಲ್ಲೂ ಮುಂದಿನ ಹಂತದಲ್ಲಿ ಅಮೆರಿಕದ ಪಾತ್ರವನ್ನು ನಿಸ್ಸಂಶಯವಾಗಿ ಹೇಳಬಹುದು ಎಂದು ರುಬಿಯೊ ಹೇಳಿದ್ದಾರೆ.

‘ಪ್ರಧಾನಿ ಯಾಕೆ ಹೆದರುತ್ತಿದ್ದಾರೆ’

‘ಯುದ್ಧ ನಿಲ್ಲಿಸಿದ್ದು ನಾವೇ’ ಎಂಬ ಮಾರ್ಕೊ ರುಬಿಯೊ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌  ‘ಪ್ರಧಾನಿ ಯಾಕೆ ಹೆದರುತ್ತಿದ್ದಾರೆ ಟ್ರಂಪ್‌ ಹೇಳಿಕೆಯನ್ನು ಅವರು ಸಾರ್ವಜನಿಕವಾಗಿ ಯಾಕೆ ಖಡಾಖಂಡಿತವಾಗಿ ತಿರಸ್ಕರಿಸುತ್ತಿಲ್ಲ’ ಎಂದು ಪ್ರಶ್ನಿಸಿದೆ. ‘ಅಮೆರಿಕದ ಮಧ್ಯಪ್ರವೇಶದಿಂದ ಭಾರತ–ಪಾಕ್‌ ಕದನ ವಿರಾಮ ಘೋಷಿಸಿದೆ ಎಂದು ಮೊದಲ ಬಾರಿಗೆ ರುಬಿಯೊ ಅವರು ಮೇ 10ರಂದು ಹೇಳಿದ್ದರು. ಆ ನಂತರ ಇದುವರೆಗೆ ಟ್ರಂಪ್‌ ಅವರು 34 ಬಾರಿ ಇದನ್ನೇ ಪುನರುಚ್ಛರಿಸಿದ್ದಾರೆ’ ಎಂದು ಕಾಂಗ್ರೆಸ್‌ ‍ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.