ADVERTISEMENT

ಭಯೋತ್ಪಾದಕ ದಾಳಿ ಪ್ರಚೋದಿಸಿದರೆ ಪಾಕ್ ಒಳನುಗ್ಗಿ ಭಾರತದಿಂದ ಪ್ರತೀಕಾರ: ಜೈಶಂಕರ್

ಪಿಟಿಐ
Published 10 ಜೂನ್ 2025, 11:04 IST
Last Updated 10 ಜೂನ್ 2025, 11:04 IST
   

ಬೆಲ್ಜಿಯಂ: ಭಯೋತ್ಪಾದಕ ದಾಳಿಯನ್ನು ಪ್ರಚೋದಿಸಿದರೆ ಭಾರತ ಪಾಕಿಸ್ತಾನದ ಒಳನುಗ್ಗಿ ದಾಳಿ ನಡೆಸಲಿದೆ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಎಚ್ಚರಿಕೆ ನೀಡಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆಸಿದ ಭೀಕರ ದಾಳಿಯಂತಹ ಕೃತ್ಯವನ್ನು ಮತ್ತೆ ನಡೆಸಿದರೆ ಉಗ್ರ ಸಂಘಟನೆ ಮತ್ತು ಅದರ ನಾಯಕರ ಮೇಲೆ ಭಾರತ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಜೈಶಂಕರ್‌ ಗುಡುಗಿದರು.

ಭಾರತ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಮೊದಲ ಬಾರಿಗೆ ಯುರೋಪ್ ಪ್ರವಾಸ ಕೈಗೊಂಡಿರುವ ಜೈಶಂಕರ್‌ ಮಾತನಾಡಿ, ‘ಪಾಕಿಸ್ತಾನ ಸಾವಿರಾರು ಉಗ್ರರಿಗೆ ಬಹಿರಂಗವಾಗಿ ತರಬೇತಿ ನೀಡಿ ಭಾರತಕ್ಕೆ ಅಟ್ಟುತ್ತಿದೆ. ಆದರೆ ನಾವು ಭಯೋತ್ಪಾದಕತೆಯೊಂದಿಗೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ನಾವು ನೀಡುವ ಎಚ್ಚರಿಕೆ ಸಂದೇಶವೆಂದರೆ, ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆಸಿದ ದಾಳಿಯಂತೆ ಮತ್ತೆ ಕೃತ್ಯ ಎಸಗಿದರೆ ಪ್ರತೀಕಾರ ಇದ್ದೇ ಇರುತ್ತದೆ. ದಾಳಿ ಮಾಡಿದವರು ಎಲ್ಲಿದ್ದಾರೆ ಎನ್ನುವುದಕ್ಕೆ ನಾವು ಗಮನ ಕೊಡುವುದಿಲ್ಲ, ಅವರು ಪಾಕಿಸ್ತಾನದಲ್ಲಿ ಎಲ್ಲೇ ಅಡಗಿದ್ದರೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ADVERTISEMENT

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದ ವೇಳೆ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಾರತ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಮೇ 7ರಂದು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು.

ಮೇ 10 ರಂದು ಕದನ ವಿರಾಮ ಒಪ್ಪಂದದ ಮೂಲಕ ಉಭಯ ದೇಶಗಳ ನಡುವೆ ನಡೆಯುತ್ತಿದ್ದ ಸಂಘರ್ಷಕ್ಕೆ ಪೂರ್ಣವಿರಾಮ ಇಡಲಾಗಿತ್ತು.

ಐರೋಪ್ಯ ರಾಷ್ಟ್ರಗಳಲ್ಲಿ ವಿದೇಶಾಂಗ ಸಚಿವ: 

ಬೆಲ್ಜಿಯಂ ಮತ್ತು ಲಕ್ಸಮ್‌ಬರ್ಗ್ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಅವರು ಸೋಮವಾರ ಐರೋಪ್ಯ ಸಂಸತ್ತಿನ ಸದಸ್ಯರನ್ನು ಭೇಟಿಯಾದರು. ಐರೋಪ್ಯ ಒಕ್ಕೂಟ, ಬೆಲ್ಜಿಯಂ ಮತ್ತು ಲಕ್ಸಮ್‌ಬರ್ಗ್‌ನ ಭಾರತೀಯ ರಾಯಭಾರಿ ಸೌರಭ್‌ ಕುಮಾರ್‌ ಜತೆಯಲ್ಲಿದ್ದರು.

ಪ್ರವಾಸದ ಬಗ್ಗೆ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ‌‘ ಐರೋಪ್ಯ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿ ಮುಖ್ಯಸ್ಥ ಡೇವಿಡ್ ಮೈಕ್ ಎಲಿಸ್ಟರ್, ಸ್ಯಾಂಡ್ರೋ ಗೋಜಿ ನೇತೃತ್ವದ ಐರೋಪ್ಯ ಮತ್ತು ಇಂಗ್ಲೆಂಡ್‌ ಸಂಸದೀಯ ನಿಯೋಗ ಮತ್ತು ಗ್ರೀಕ್ ಸಂಸದ ನಿಕೋಸ್ ಪಾಪಂಡ್ರೆವು ಅವರ ಭೇಟಿ ಫಲಪ್ರದವಾಗಿತ್ತು’ ಎಂದು ಹೇಳಿದ್ದಾರೆ.

ಸೋಮವಾರ ಸಂಜೆ ಅನಿವಾಸಿ ಭಾರತೀಯ ಸಮುದಾಯದ ಸದಸ್ಯರ ಜೊತೆಯೂ ಜೈಶಂಕರ್‌ ಸಂವಾದ ನಡೆಸಿದರು.

‘ಭಯೋತ್ಪಾದನೆಗೂ ಪಾಕ್‌ಗೂ ಚಾರಿತ್ರಿಕ ನಂಟು’ 

‘ಭಯೋತ್ಪಾದನೆಯನ್ನು ದ್ವಿಪಕ್ಷೀಯ ಸಮಸ್ಯೆ ಎಂದು ಬಿಂಬಿಸುವುದಕ್ಕಿಂತ ಜಾಗತಿಕ ಸಮಸ್ಯೆಯೆಂದೇ ಪರಿಗಣಿಸಬೇಕು’ ಎಂದು ಪ್ರತಿಪಾದಿಸಿದ ಜೈಶಂಕರ್ ಜಾಗತಿಕವಾಗಿ ನಡೆದ ಭಯೋತ್ಪಾದನೆ ಕೃತ್ಯಗಳಿಗೂ ಪಾಕಿಸ್ತಾನಕ್ಕೂ ಇರುವ ಚಾರಿತ್ರಿಕ ನಂಟನ್ನು ಎತ್ತಿ ತೋರಿಸಿದರು. ಬ್ರೆಜಿಲ್‌ನ ವಿದೇಶಾಂಗ ಸಚಿವ ಮೈಕ್ಸಿಮ್ ಪ್ರಿವೋಟ್‌ ಅವರೊಂದಿಗೆ ‘ಆಪರೇಷನ್ ಸಿಂಧೂರ’ ಕುರಿತು ಅವರು ಚರ್ಚಿಸಿದರು. 2016ರಲ್ಲಿ ನಡೆದ ಬ್ರಸೆಲ್ಸ್ ಮೇಲಿನ ಉಗ್ರರ ದಾಳಿ ಉಲ್ಲೇಖಿಸಿದ ಸಚಿವರು ‘ಹಲವು ದೇಶಗಳಿಗೆ ಭಯೋತ್ಪಾದನೆ ಇಂದು ಸವಾಲಾಗಿದೆ. ಒಂದು ಗುಂಪು ಇದನ್ನು ನಡೆಸುತ್ತದೆ ಎಂಬುದು ನಿಮಗೆ ಗೊತ್ತು. ಆದರೆ ಒಂದು ದೇಶ ರಾಜಾರೋಷವಾಗಿ ಇದನ್ನೇ (ಭಯೋತ್ಪಾದನೆ) ತನ್ನ ನೀತಿ ಮಾಡಿಕೊಂಡಿದೆ’ ಎಂದು ಟೀಕಿಸಿದರು.  ‘ಇಲ್ಲೂ (ಐರೋಪ್ಯ ರಾಷ್ಟ್ರಗಳು) ಭಯೋತ್ಪಾದನೆ ನಡೆಯುತ್ತದೆ. ಕಳೆದ 20–30 ವರ್ಷಗಳನ್ನು ನೋಡಿದರೆ ಈ ಕೃತ್ಯಗಳ ಮೂಲ ಪಾಕಿಸ್ತಾನವೇ ಆಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.