ADVERTISEMENT

ಕೂಡಲೇ ನಿಮ್ಮ ಮಾಹಿತಿ ನೀಡಿ: ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಸೂಚನೆ

ಐಎಎನ್ಎಸ್
Published 6 ಮಾರ್ಚ್ 2022, 10:56 IST
Last Updated 6 ಮಾರ್ಚ್ 2022, 10:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಉಕ್ರೇನ್‌ನಲ್ಲಿರುವ ಭಾರತೀಯರು ತಾವಿರುವ ಸ್ಥಳ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಕೂಡಲೇ ಒದಗಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿಯು ಭಾನುವಾರ ತಿಳಿಸಿದೆ. ನೋಂದಣಿಗೆ ‘ಗೂಗಲ್‌ ಶೀಟ್‌’ ನೀಡಿದ್ದು, ಅದರಲ್ಲಿ ಮಾಹಿತಿ ತುಂಬಲು ಹೇಳಿದೆ.

‘ಕೀವ್ ಮತ್ತು ಉಕ್ರೇನ್‌ನ ಯಾವುದೇ ಭಾಗದಲ್ಲಿ ಸಿಲುಕಿರುವ ಎಲ್ಲಾ ಭಾರತೀಯ ನಾಗರಿಕರು, ಇನ್ನೂ ಉಕ್ರೇನ್‌ ತೊರೆಯಲು ಸಾಧ್ಯವಾಗದವರು, ಕೂಡಲೇ ಸ್ಥಳಾಂತರಗೊಳ್ಳಬೇಕಾದ ಅಗತ್ಯವಿರುವವರು ತಕ್ಷಣವೇ ಗೂಗಲ್‌ ಶೀಟ್‌ ಅನ್ನು ತುಂಬಬೇಕು’ ಎಂದು ರಾಯಭಾರ ಕಚೇರಿ ತಿಳಿಸಿದೆ.

ಇಮೇಲ್, ಹೆಸರು, ಪಾಸ್‌ಪೋರ್ಟ್ ಸಂಖ್ಯೆ, ವಯಸ್ಸು, ಲಿಂಗ, ಸ್ಥಳ (ಉಕ್ರೇನ್‌ನಲ್ಲಿನ ಪ್ರದೇಶ), ಪ್ರಸ್ತುತ ಇರುವ ಸ್ಥಳದ ವಿಳಾಸ, ಸಂಪರ್ಕ ಸಂಖ್ಯೆ, ಭಾರತದಲ್ಲಿನ ಸಂಪರ್ಕ ಸಂಖ್ಯೆ ಮತ್ತು ಅವರೊಂದಿಗೆ ಉಳಿದಿರುವ ಹೆಚ್ಚುವರಿ ಭಾರತೀಯರ ಸಂಖ್ಯೆಯನ್ನು ಹಂಚಿಕೊಳ್ಳಲು ಸೂಚಿಸಲಾಗಿದೆ.

ADVERTISEMENT

ಸುಮಿ ಮತ್ತು ಹಾರ್ಕಿವ್ ಪ್ರದೇಶವನ್ನು ಹೊರತುಪಡಿಸಿ ಉಕ್ರೇನ್‌ನ ಇತರ ಪ್ರದೇಶಗಳಲ್ಲಿನ ಬಹುತೇಕ ಭಾರತೀಯರು ದೇಶ ತೊರೆದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು. ನಂತರ ಹಾರ್ಕಿವ್ ಪ್ರದೇಶದಿಂದಲೂ ಪ್ರತಿಯೊಬ್ಬ ಭಾರತೀಯ ಪ್ರಜೆಯನ್ನು ಸ್ಥಳಾಂತರಿಸಲಾಗಿದೆ ಎಂದು ಗೊತ್ತಾಗಿತ್ತು.

ಸದ್ಯ ಸುಮಿ ಪ್ರದೇಶದಲ್ಲಿ ಸ್ಥಳಾಂತರ ಕಾರ್ಯಾಚರಣೆ ಚುರುಕುಕೊಂಡಿದೆ ಎಂದು ಬಾಗ್ಚಿ ಹೇಳಿದ್ದಾರೆ.

ಫೆಬ್ರುವರಿ 24 ರ ಮುಂಜಾನೆ ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಷ ಆರಂಭವಾಗಿತ್ತು.

ಕಡೇ ಹಂತದ ಕಾರ್ಯಾಚರಣೆ

‘ಭಾರತದ ರಾಯಭಾರ ಕಚೇರಿಯು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಇಂದು ಕಡೇ ಹಂತದ ‘ಆಪರೇಷನ್ ಗಂಗಾ’ ಕಾರ್ಯಾಚರಣೆ ನಡೆಸಲಿದೆ. ಉಕ್ರೇನ್‌ನಲ್ಲಿ ಉಳಿದುಕೊಂಡಿರುವ ಎಲ್ಲಾ ವಿದ್ಯಾರ್ಥಿಗಳು ಹಂಗೆರಿಯ ಸಿಟಿ ಸೆಂಟರ್, ರಾಕೋಸಿ ಯುಟಿ 90, ಬುಡಾಪೆಸ್ಟ್ ಅನ್ನು ಕೂಡಲೇ ತಲುಪಬೇಕು ವಿನಂತಿಸಲಾಗಿದೆ’ ಎಂದು ಹಂಗೆರಿಯಲ್ಲಿನ ಭಾರತೀಯ ರಾಯಭಾರ ಕಚೇರಿ ಟ್ವೀಟ್‌ ಮೂಲಕ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.