
ಸಾಕೇತ್ ಶ್ರೀನಿವಾಸಯ್ಯ
(ಚಿತ್ರ–@Cloudwatch199)
ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಆತನನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬರ್ಕ್‌ಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ಕರ್ನಾಟಕ ಮೂಲದ ಸಾಕೇತ್ ಶ್ರೀನಿವಾಸಯ್ಯ (22) ಮಂಗಳವಾರ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾರ್ಕ್ ಹಿಲ್ಸ್ ಪ್ರದೇಶದ ಮನೆ ಬಾಗಿಲಿನಲ್ಲಿ ಅವರ ಪಾಸ್‌ಪೋರ್ಟ್, ಲ್ಯಾಪ್‌ಟಾಪ್ ಮತ್ತು ಬ್ಯಾಗ್ ಪತ್ತೆಯಾಗಿದೆ ಎಂದು 'ದಿ ಬರ್ಕ್ಲಿ ಸ್ಕ್ಯಾನರ್' ನ್ಯೂಸ್ ಪೋರ್ಟಲ್ ವರದಿ ಮಾಡಿದೆ.
ಸಾಕೇತ್ ಶ್ರೀನಿವಾಸಯ್ಯ ಅವರು ನಾಪತ್ತೆಯಾದ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಸದ್ಯ ವಿದ್ಯಾರ್ಥಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಆತನನ್ನು ಪತ್ತೆಹಚ್ಚಲು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಸಾಕೇತ್ ಕೊನೆಯ ಬಾರಿಗೆ ಡ್ವೈಟ್ ವೇಯ 1700 ಬ್ಲಾಕ್‌ನಲ್ಲಿ ಕಾಣಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಕೇತ್ ಸುಮಾರು 6 ಅಡಿ 1 ಇಂಚು ಎತ್ತರ , 73 ಕೆ.ಜಿ ತೂಕ, ಕಪ್ಪು ಕೂದಲು ಮತ್ತು ಕಂದು ಬಣ್ಣದ ಕಣ್ಣುಗಳನ್ನು ಹೊಂದಿದ್ದಾರೆಂದು. ಇವರ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕರೆ ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳಿಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.