ADVERTISEMENT

ಇರಾನ್‌ | ಸೇನಾ ಕಮಾಂಡರ್‌ಗಳ ಅಂತ್ಯಕ್ರಿಯೆ: ಮೆರವಣಿಗೆಗೆ ಸಾಕ್ಷಿಯಾದ ಲಕ್ಷಾಂತರ ಜನ

ಏಜೆನ್ಸೀಸ್
Published 28 ಜೂನ್ 2025, 13:29 IST
Last Updated 28 ಜೂನ್ 2025, 13:29 IST
<div class="paragraphs"><p>ಇಸ್ರೇಲ್‌ನ ದಾಳಿಯಲ್ಲಿ ಹತ್ಯೆಯಾದ ಇರಾನ್‌ ಸೇನೆಯ ಕಮಾಂಡರ್‌ಗಳು, ಅಣು ವಿಜ್ಞಾನಿಗಳ ಅಂತ್ಯಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ </p></div>

ಇಸ್ರೇಲ್‌ನ ದಾಳಿಯಲ್ಲಿ ಹತ್ಯೆಯಾದ ಇರಾನ್‌ ಸೇನೆಯ ಕಮಾಂಡರ್‌ಗಳು, ಅಣು ವಿಜ್ಞಾನಿಗಳ ಅಂತ್ಯಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ

   

–ಎಎಫ್‌ಪಿ ಚಿತ್ರ 

ಟೆಹರಾನ್‌: ಇಸ್ರೇಲ್‌ನ ದಾಳಿಯಲ್ಲಿ ಹತ್ಯೆಯಾದ ಇರಾನ್‌ ಸೇನೆಯ ಕಮಾಂಡರ್‌ಗಳು, ಅಣು ವಿಜ್ಞಾನಿಗಳು ಸೇರಿ ಪ್ರಮುಖ 60 ಮಂದಿಯ ಅಂತ್ಯಕ್ರಿಯೆ ಶನಿವಾರ ನಡೆಯಿತು.

ADVERTISEMENT

ಅಂತಿಮ ಮೆರವಣಿಗೆಗೆ ಸಾಕ್ಷಿಯಾಗಲು ಕಪ್ಪು ಬಟ್ಟೆ ಧರಿಸಿ ಜನರು ಲಕ್ಷೋಪಾದಿಯಲ್ಲಿ ಸೇರಿದ್ದರು. ಇರಾನ್‌ನ ರಾಜಧಾನಿ ಟೆಹರಾನ್‌ನ ಬೀದಿಗಳಿಗೆ ಕಪ್ಪು ಬಟ್ಟೆ ಹೊದಿಸಿದಂತೆ ಭಾಸವಾಗುತ್ತಿತ್ತು.

‘ಅಮೆರಿಕಕ್ಕೆ ಸಾವಾಗಲಿ’, ‘ಇಸ್ರೇಲ್‌ನ ಸಾವಾಗಲಿ’ ಎನ್ನುತ್ತಾ ಜನರು ಆಕ್ರೋಶ ವ್ಯಕ್ತಪಡಿಸಿದರು. 11 ಕಿ.ಮೀ ಉದ್ದದ ಮೆರವಣಿಗೆ ಉದ್ದಕ್ಕೂ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರ ವಿರುದ್ಧ ಘೋಷಣೆಗಳು ಮೊಳಗಿದವು. ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು. ಹತ್ಯೆಯಾದ ದೇಶದ ಪ್ರಮುಖರ ಫೋಟೊಗಳನ್ನು, ಇರಾನ್‌ನ ರಾಷ್ಟ್ರಧ್ವಜವನ್ನು ಜನರು ಹಿಡಿದು ಸಾಗಿದರು.

ನಗರದ ವ್ಯಾಪಾರ–ವಹಿವಾಟು ಸ್ಥಗಿತಗೊಂಡಿತ್ತು. ‘ಇರಾನ್‌ ಜನರು ರಕ್ತ ಅರ್ಪಿಸಿದ್ದಾರೆ, ಭೂಮಿಯನ್ನಲ್ಲ; ಅವರು ತಮ್ಮ ಪ್ರೀತಿಪಾತ್ರರನ್ನು ಅರ್ಪಿಸಿದ್ದಾರೆ, ತಮ್ಮ ಆತ್ಮಗೌರವವನ್ನಲ್ಲ; ಸಾವಿರಾರು ಸಂಖ್ಯೆಯ ಬಾಂಬ್‌ನ ಮಳೆಯನ್ನು ತಡೆದುಕೊಂಡಿದ್ದಾರೆ, ಆದರೆ ಶರಣಾಗಲಿಲ್ಲ’ ಎಂದು ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ ‘ಎಕ್ಸ್‌’ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇಸ್ರೇಲ್‌ನ ದಾಳಿಯಲ್ಲಿ ಹತ್ಯೆಯಾದ ಇರಾನ್‌ ಸೇನೆಯ ಕಮಾಂಡರ್‌ಗಳು ಅಣು ವಿಜ್ಞಾನಿಗಳ ಅಂತ್ಯಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ

 ಖಮೇನಿ ಉಳಿಸಿದ್ದು ನಾನು: ಟ್ರಂಪ್‌

‘ಅವರು (ಇರಾನ್‌ನ ಸರ್ವೋಚ್ಚ ನಾಯಕ ಆಯತ್‌ ಉಲ್ಲಾ ಅಲಿ ಖಮೇನಿ) ಎಲ್ಲಿದ್ದಾರೆ ಎಂದು ನಮಗೆ ಖಚಿತವಾಗಿ ತಿಳಿದಿತ್ತು. ಅವರನ್ನು ಹತ್ಯೆ ಮಾಡಲು ಇಸ್ರೇಲ್‌ ಅಥವಾ ನಮ್ಮ ಸೇನೆಗೆ ಒಪ್ಪಿಗೆ ನೀಡಲಿಲ್ಲ. ನಾನು ಅವರನ್ನು ಅವಮಾನಕರ ಸಾವಿನಿಂದ ಉಳಿಸಿದ್ದೇನೆ. ಅವರು ನನಗೇನೂ ಧನ್ಯವಾದ ಹೇಳುವುದು ಬೇಡ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಟ್ರಂಪ್‌ ಅವರ ಹೇಳಿಕೆಗೆ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅವರು ಶನಿವಾರ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ‘ಟ್ರಂಪ್‌ ಅವರಿಗೆ ನಿಜವಾಗಿಯೂ ಒಪ್ಪಂದ ಬೇಕಿದ್ದರೆ ಖಮೇನಿ ಅವರ ಕುರಿತ ಅಗೌರವದ ಮಾತುಗಳನ್ನಾಡುವುದನ್ನು ಬಿಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.