ವಾಂಗ್ ಯಿ
ಬೀಜಿಂಗ್: ಇರಾನ್ ಮತ್ತು ಇಸ್ರೇಲ್ ನಡುವೆ ನಿಜವಾದ ಕದನ ವಿರಾಮ ಏರ್ಪಡಲಿ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಟರ್ಕಿಯ ವಿದೇಶಾಂಗ ಸಚಿವರೊಂದಿಗೆ ಮಂಗಳವಾರ ದೂರವಾಣಿ ಸಂಭಾಷಣೆ ನಡೆಸಿದ ವಾಂಗ್ ಯಿ, ‘ಇರಾನ್, ಇಸ್ರೇಲ್ ಹಾಗೂ ಇತರ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕದನ ವಿರಾಮ ನಿಜವಾಗಿಯೂ ಆಗಲಿ ಎಂದು ಚೀನಾ ಬಯಸುತ್ತಿದೆ’ ಎಂದಿದ್ದಾರೆ.
'ಇರಾನ್‌ನ ಅಣ್ವಸ್ತ್ರ ವಿಷಯಕ್ಕೆ ಸಂಬಂಧಿಸಿದ ರಾಷ್ಟ್ರಗಳು ಸಮಾನ ವೇದಿಕೆಯಲ್ಲಿ ಚರ್ಚೆ ನಡೆಸಬೇಕು. ಆ ಮೂಲಕ ರಾಜಕೀಯ ಇತ್ಯರ್ಥ ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.
‘ಪಶ್ಚಿಮ ಏಷ್ಯಾದಲ್ಲಿ ಪ್ಯಾಲೆಸ್ಟೀನ್ ವಿವಾದವೂ ಪರಿಹಾರ ಕಂಡಿಲ್ಲ’ ಎಂದು ವಾಂಗ್ ಹೇಳಿದ್ದಾರೆ.
ಇರಾನ್‌ನ ಪರಮಾಣು ಘಟಕಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡಾ ಇಸ್ರೇಲ್ ದಾಳಿ ನಡೆಸಿತ್ತು. ಉಭಯ ರಾಷ್ಟ್ರಗಳು ಕಳೆದ 12 ದಿನಗಳಿಂದ ಯುದ್ಧ ನಡೆಸುತ್ತಿವೆ.
‘ಆಪರೇಷನ್ ರೈಸಿಂಗ್ ಲಯನ್’ ಹೆಸರಿನಡಿ ಇಸ್ರೇಲ್ ಸೇನಾ ಕಾರ್ಯಾಚರಣೆ ನಡೆಸಿ ಇರಾನ್‌ನ ಪ್ರಮುಖ ಅಧಿಕಾರಿಗಳನ್ನು ಹತ್ಯೆಗೈದಿರುವುದಾಗಿ ಹೇಳಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರ ನೀಡಿರುವ ಇರಾನ್‌ನ ಪರಮೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿದ್ದರು.
‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಹೆಸರಿನ ಸೇನಾ ಕಾರ್ಯಾಚರಣೆ ನಡೆಸಿದ ಅಮೆರಿಕ, ಇರಾನ್‌ನ ಪ್ರಮುಖ ಅಣುಶಕ್ತಿ ಕೇಂದ್ರಗಳನ್ನು ನಾಶಪಡಿಸಿತು. ಇದರ ಬೆನ್ನಲ್ಲೇ ಜೂನ್ 24ರಂದು ಇರಾನ್ ಮತ್ತು ಇಸ್ರೇಲ್ ಕದನ ವಿರಾಮ ಘೋಷಿಸಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.