ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ)
-ರಾಯಿಟರ್ಸ್ ಚಿತ್ರ
ವಾಷಿಂಗ್ಟನ್/ಜೆರುಸಲೇಮ್: ಇರಾನ್‌ನ ಫೋರ್ಡೊ ಸೇರಿದಂತೆ ಮೂರು ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದ ನಂತರ ವಿಕಿರಣ ಮಟ್ಟದಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ತಿಳಿಸಿದೆ.
ವಾಯುಪ್ರದೇಶ ಮತ್ತು ನೀರಿನಲ್ಲಿ ಪರಮಾಣು ರಕ್ಷಣಾ ಕೇಂದ್ರವು ವಿಕಿರಣಶೀಲ ಕುರುಹುಗಳ ಹೆಚ್ಚಳವನ್ನು ಪತ್ತೆ ಮಾಡಿಲ್ಲ ಎಂದು ಕುವೈತ್ ಹೇಳಿದೆ.
ಅಮೆರಿಕ ದಾಳಿ ಕುರಿತು ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್, ‘ಇಂದು ಅತಿರೇಕದ ಘಟನೆಗಳು ನಡೆದಿದ್ದು, ಇದರಿಂದ ಶಾಶ್ವತ ಪರಿಣಾಮಗಳು ಬೀರಲಿವೆ. ಜತೆಗೆ, ಅಂತರರಾಷ್ಟ್ರೀಯ ಕಾನೂನು ಮತ್ತು ಪರಮಾಣು ಪ್ರಸರಣ ರಹಿತ ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇರಾನ್ ತನ್ನ ಸಾರ್ವಭೌಮತ್ವ, ಹಿತಾಸಕ್ತಿ ಮತ್ತು ಜನರನ್ನು ರಕ್ಷಿಸಿಕೊಳ್ಳಲು ಎಲ್ಲಾ ಆಯ್ಕೆಗಳನ್ನು ಕಾಯ್ದಿರಿಸಿದೆ ಎಂದೂ ಅವರು ಹೇಳಿದ್ದಾರೆ.
‘ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಇಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ನಡೆಸಿದ ದಾಳಿ ಯಶಸ್ವಿಯಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪ್ರಮುಖ ಪರಮಾಣು ಘಟಕಗಳ ಮೇಲೆ ಭಾರಿ ಪ್ರಮಾಣದ ಬಾಂಬ್ ಹಾಕಲಾಗಿದ್ದು, ಎಲ್ಲ ಯುದ್ಧವಿಮಾನಗಳು ಸುರಕ್ಷಿತವಾಗಿ ಮರಳಿವೆ. ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದರೆ ಮತ್ತಷ್ಟು ದಾಳಿ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷ ಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.