ADVERTISEMENT

ಇರಾನ್‌ನ ಮೂರು ಅಣು ಕೇಂದ್ರಗಳ ಮೇಲೆ ಅಮೆರಿಕದಿಂದ ಬಾಂಬ್ ದಾಳಿ: ಡೊನಾಲ್ಡ್ ಟ್ರಂಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2025, 1:51 IST
Last Updated 22 ಜೂನ್ 2025, 1:51 IST
<div class="paragraphs"><p>ಅಮೆರಿಕದ ಯುದ್ಧ ವಿಮಾನ, ಡೊನಾಲ್ಡ್ ಟ್ರಂಪ್</p></div>

ಅಮೆರಿಕದ ಯುದ್ಧ ವಿಮಾನ, ಡೊನಾಲ್ಡ್ ಟ್ರಂಪ್

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಇರಾನ್‌ನ ಮೂರು ಅಣು ಕೇಂದ್ರಗಳ ಮೇಲೆ ಅತ್ಯಂತ ಯಶಸ್ವಿ ಬಾಂಬ್ ದಾಳಿ ನಡೆಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ 'ಟ್ರತ್‌'ನಲ್ಲಿ ಮಾಹಿತಿ ನೀಡಿದ್ದು, ಅಮೆರಿಕ ನಡೆಸಿರುವ ಕಾರ್ಯಾಚರಣೆಯ ಸಂಬಂಧ ಶ್ವೇತಭವನದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದಾಗಿ ತಿಳಿಸಿದ್ದಾರೆ.

'ಇರಾನ್‌ನ ಫೋರ್ಡೊ, ನತಾನ್ಜ್ ಮತ್ತು ಇಸ್ಪಹಾನ್ ಅಣು ಕೇಂದ್ರಗಳಲ್ಲಿ ದಾಳಿ ನಡೆಸಲಾಗಿದೆ. ಎಲ್ಲ ವಿಮಾನಗಳು ಇರಾನ್ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹೊರಗೆ ಬಂದಿವೆ. ಪ್ರಾಥಮಿಕ ಅಣು ಕೇಂದ್ರವಾದ ಫೋರ್ಡೊದಲ್ಲಿ ಪೂರ್ಣ ಪ್ರಮಾಣದ ಪೇಲೋಡ್ ಹೊಂದಿದ ಬಾಂಬ್ ದಾಳಿ ನಡೆಸಲಾಯಿತು' ಎಂದು ಅವರು ಹೇಳಿದ್ದಾರೆ.

'ಎಲ್ಲ ಯುದ್ಧ ವಿಮಾನಗಳು ಸುರಕ್ಷಿತವಾಗಿ ಹಿಂತಿರುಗುತ್ತಿವೆ. ಮಹಾನ್ ಅಮೆರಿಕದ ಯೋಧರಿಗೆ ಅಭಿನಂದನೆಗಳು. ಜಗತ್ತಿನ ಬೇರೆ ಯಾವುದೇ ಸೈನ್ಯಕ್ಕೆ ಇಂತಹ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ಈಗ ಶಾಂತಿಯ ಸಮಯ!' ಎಂದು ಹೇಳಿದ್ದಾರೆ.

ಮಗದೊಂದು ಪೋಸ್ಟ್‌ನಲ್ಲಿ ಇರಾನ್ ಅಣು ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿರುವ ಕಾರ್ಯಾಚರಣೆ ಕುರಿತು ಶ್ವೇತಭವನದಲ್ಲಿ ಮಾತನಾಡುವುದಾಗಿ ಟ್ರಂಪ್ ತಿಳಿಸಿದ್ದಾರೆ.

'ಅಮೆರಿಕ, ಇಸ್ರೇಲ್ ಮತ್ತು ಇಡೀ ಜಗತ್ತಿಗೆ ಇದು ಐತಿಹಾಸಿಕ ಕ್ಷಣವಾಗಿದೆ. ಯುದ್ಧವನ್ನು ನಿಲ್ಲಿಸಲು ಇರಾನ್ ಈಗ ಸಿದ್ಧವಾಗಲೇಬೇಕು' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.