ADVERTISEMENT

ಇಸ್ರೇಲ್–ಇರಾನ್ ಸಂಘರ್ಷ ತೀವ್ರ: 230ಕ್ಕೂ ಹೆಚ್ಚು ಮಂದಿ ಸಾವು

ಏಜೆನ್ಸೀಸ್
Published 16 ಜೂನ್ 2025, 3:07 IST
Last Updated 16 ಜೂನ್ 2025, 3:07 IST
<div class="paragraphs"><p>ಇಸ್ರೇಲ್‌ನ ಬ್ಯಾಟ್‌ ಯಾಮ್‌ನ ಜನವಸತಿ ಪ್ರದೇಶದ ಮೇಲೆ ಇರಾನ್‌ ಕ್ಷಿಪಣಿ ದಾಳಿ ಬಳಿಕ ಕಟ್ಟಡಗಳು ನಾಶಗೊಂಡಿವೆ&nbsp;</p></div>

ಇಸ್ರೇಲ್‌ನ ಬ್ಯಾಟ್‌ ಯಾಮ್‌ನ ಜನವಸತಿ ಪ್ರದೇಶದ ಮೇಲೆ ಇರಾನ್‌ ಕ್ಷಿಪಣಿ ದಾಳಿ ಬಳಿಕ ಕಟ್ಟಡಗಳು ನಾಶಗೊಂಡಿವೆ 

   

–ಪಿಟಿಐ ಚಿತ್ರ

ಜೆರುಸಲೇಂ: ಇರಾನ್‌ನ ರಕ್ಷಣಾ ಕೇಂದ್ರಗಳು, ತೈಲ ಘಟಕಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ದಾಳಿ ನಡೆಸಿದೆ.

ADVERTISEMENT

ಟೆಹರಾನ್‌ನಲ್ಲಿರುವ ಇರಾನ್‌ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮೇಲೆ ಇಸ್ರೇಲ್‌ ಭಾನುವಾರ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್‌ನ ಕ್ಷಿಪಣಿಗಳು, ಇಸ್ರೇಲ್‌ ವಾಯುರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ಅಲ್ಲಿನ ಹಲವು ಕಟ್ಟಡಗಳನ್ನು ನಾಶಗೊಳಿಸಿವೆ.

ಸೋಮವಾರ ಬೆಳಿಗ್ಗೆ ಟೆಹರಾನ್‌ನ ವಿವಿಧೆಡೆಯೂ ಸ್ಫೋಟಗಳು ಸಂಭವಿಸಿವೆ. ನಾಲ್ಕು ದಿನಗಳ ಸಂಘರ್ಷದಲ್ಲಿ ದೇಶದಲ್ಲಿ 224 ಮಂದಿ ಮೃತಪಟ್ಟಿದ್ದು, 1,277ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ವಿಶ್ವಸಂಸ್ಥೆಯ ರಾಯಭಾರಿ ತಿಳಿಸಿದ್ದಾರೆ.

ಇಸ್ರೇಲ್ ದಾಳಿಯಿಂದಾಗಿ ತೈಲ ಸಂಸ್ಕರಣಾ ಘಟಕಕ್ಕೆ ಹಾನಿಯಾಗಿದೆ. ಗುಪ್ತಚರ ಮುಖ್ಯಸ್ಥ ಮತ್ತು ಇತರ ಇಬ್ಬರು ಜನರಲ್‌ಗಳನ್ನು ಹತ್ಯೆ ಮಾಡಲಾಗಿದೆ. ಜತೆಗೆ, ಜನವಸತಿ ಪ್ರದೇಶಗಳ ಮೇಲೆ ತೀವ್ರವಾದ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್ ಹೇಳಿದೆ.

ಆಪರೇಷನ್‌ ರೈಸಿಂಗ್‌ ಲಯನ್’ ಹೆಸರಿನಡಿ ಇಸ್ರೇಲ್ ನಡೆದ ಕಾರ್ಯಾಚರಣೆಯಲ್ಲಿ ಇರಾನ್‌ ಸೇನೆಯ ಅತ್ಯುನ್ನತ ಶ್ರೇಣಿಯ ಅಧಿಕಾರಿ, ಸಶಸ್ತ್ರ ಪಡೆಗಳ ಮುಖ್ಯಸ್ಥ ಮೊಹಮ್ಮದ್‌ ಬಘೇರಿ ಮತ್ತು ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ) ಮುಖ್ಯಸ್ಥ ಹುಸೇನ್‌ ಸಲಾಮಿ ಅವರು ಶುಕ್ರವಾರ ಮೃತಪಟ್ಟಿದ್ದರು.

ಐಆರ್‌ಜಿಸಿಯ ಗುರಿ ನಿರ್ದೇಶಿತ ಕ್ಷಿಪಣಿ ಯೋಜನೆಯ ಮುಖ್ಯಸ್ಥ ಅಮೀರ್‌ ಅಲಿ ಹಾಜಿಝದಾ ಅವರೂ ಮೃತಪಟ್ಟಿದ್ದರು. ಈ ಮೂವರ ಸಾವನ್ನು ಇರಾನ್‌ ದೃಢಪಡಿಸಿತ್ತು. ಇರಾನ್‌ ಪರಮಾಣು ಯೋಜನೆಯಲ್ಲಿ ಭಾಗಿಯಾಗಿರುವ ಹಲವು ವಿಜ್ಞಾನಿಗಳೂ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಈ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲ್‌ ಅನ್ನು ‘ಕಠಿಣ ಶಿಕ್ಷೆ’ಗೆ ಗುರಿಪಡಿಸಲಾಗುವುದು ಎಂದು ಇರಾನ್‌ನ ಪರಮೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಇರಾನ್‌ ಸೇನೆ ಇಸ್ರೇಲ್‌ನತ್ತ ಹಲವು ಡ್ರೋನ್‌ಗಳನ್ನು ಹಾರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.