ADVERTISEMENT

ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ: ಐವರು ಪತ್ರಕರ್ತರು ಸೇರಿ 20 ಮಂದಿ ಸಾವು

ಏಜೆನ್ಸೀಸ್
Published 25 ಆಗಸ್ಟ್ 2025, 11:33 IST
Last Updated 25 ಆಗಸ್ಟ್ 2025, 11:33 IST
   

ಗಾಜಾ/ಪ್ಯಾಲೆಸ್ಟೀನ್‌: ಇಲ್ಲಿನ ಖಾನ್‌ ಯೂನಿಸ್‌ನಲ್ಲಿರುವ ನಾಸರ್‌ ಆಸ್ಪತ್ರೆಯ ಮೇಲೆ ಸೋಮವಾರ, ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

ದಾಳಿಯಲ್ಲಿ ಐವರು ಪತ್ರಕರ್ತರು, ನಾಗರಿಕ ರಕ್ಷಣಾ ಸಂಸ್ಥೆಯ ಓರ್ವ ಸದಸ್ಯ ಸೇರಿ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ ಎಂದು ಸಂಸ್ಥೆಯ ವಕ್ತಾರ ಮೊಹಮ್ಮದ್‌ ಬಸ್ಸಾಲ್‌ ತಿಳಿಸಿದ್ದಾರೆ.

ಮಾಧ್ಯಮಗಳ ಬಗ್ಗೆ ನಿಗಾ ಇಡುವವರ ಪ್ರಕಾರ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ (2 ವರ್ಷಗಳಲ್ಲಿ) ಸುಮಾರು 200 ಪತ್ರಕರ್ತರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ADVERTISEMENT

ನಾಸರ್ ಆಸ್ಪತ್ರೆಯ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ವರದಿಗಾರರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ ಪತ್ರಕರ್ತರ ಸಿಂಡಿಕೇಟ್ ಹೇಳಿದೆ.

ಮೃತರನ್ನು ಛಾಯಾಗ್ರಾಹಕರಾದ ಹೊಸಮ್ ಅಲ್‌ ಮಸ್ರಿ, ಮೊಹಮ್ಮದ್ ಸಲಾಮಾ ಮತ್ತು ಮರಿಯಮ್ ದಗ್ಗಾ ಹಾಗೂ ಪತ್ರಕರ್ತ ಮೋಜ್ ಅಬು ತಹಾ ಎಂದು ಗುರುತಿಸಿದೆ.

ಸೋಮವಾರ ವೈದ್ಯಕೀಯ ಸಂಕೀರ್ಣದ ಮೇಲೆ ನಡೆದ ದಾಳಿಯಲ್ಲಿ ತನ್ನ ಸಂಸ್ಥೆಯ ಛಾಯಾಗ್ರಾಹಕ ಮೊಹಮ್ಮದ್ ಸಲಾಮಾ ಮೃತಪಟ್ಟಿದ್ದಾರೆ ಎಂದು ಕತಾರ್ ಮೂಲದ ಟಿವಿ ನೆಟ್‌ವರ್ಕ್ ಅಲ್ ಜಜೀರಾ ವಕ್ತಾರರು ದೃಢಪಡಿಸಿದ್ದಾರೆ.

ಇತರ ಮೂವರು ಪ್ಯಾಲೆಸ್ಟೀನ್‌ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳೊಂದಿಗೆ ಕೆಲಸ ಮಾಡುತ್ತಿದ್ದರು ಎಂದು ಎಎಫ್‌ಪಿ ವರದಿ ಮಾಡಿದೆ.

ಮರಿಯಮ್ ದಗ್ಗಾ ಅವರು ಹವ್ಯಾಸಿ ಪತ್ರಕರ್ತರಾಗಿದ್ದರು ಎಂದು ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ.

ಮೃತ ಒಬ್ಬ ಪತ್ರಕರ್ತ ಹಾಗೂ ಗಾಯಗೊಂಡ ಇನ್ನೊಬ್ಬ ಪತ್ರಕರ್ತ ತನ್ನ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಸುದ್ದಿಸಂಸ್ಥೆ ರಾಯಿಟರ್ಸ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.