ADVERTISEMENT

ಅಕ್ರಮ ಬಂದೂಕು ಖರೀದಿ ಪ್ರಕರಣ: ಪುತ್ರ ಹಂಟರ್‌ ಕ್ಷಮಾದಾನಕ್ಕೆ ಸಹಿ ಹಾಕಿದ ಬೈಡನ್

ರಾಯಿಟರ್ಸ್
Published 2 ಡಿಸೆಂಬರ್ 2024, 2:25 IST
Last Updated 2 ಡಿಸೆಂಬರ್ 2024, 2:25 IST
<div class="paragraphs"><p>ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು&nbsp;ಹಂಟರ್ ಬೈಡನ್‌</p></div>

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಹಂಟರ್ ಬೈಡನ್‌

   

–ರಾಯಿಟರ್ಸ್ ಚಿತ್ರ

ವಾಷಿಂಗ್ಟನ್: ಅಕ್ರಮವಾಗಿ ಬಂದೂಕು ಖರೀದಿಸಿದ್ದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪುತ್ರ ಹಂಟರ್ ಬೈಡನ್‌ ಅವರಿಗೆ ಕ್ಷಮಾದಾನ ನೀಡುವಂತೆ ಕೋರಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅರ್ಜಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಹಂಟರ್ ಬೈಡೆನ್‌ ಅಕ್ರಮವಾಗಿ ಬಂದೂಕು ಖರೀದಿಸಿ ಮತ್ತು ತೆರಿಗೆ ವಂಚನೆ ಪ್ರಕರಣಗಳಲ್ಲಿ ಶಿಕ್ಷೆಯನ್ನು ಎದುರಿಸಿದ್ದಾರೆ. ತನ್ನ ಮಗನನ್ನು ಅನ್ಯಾಯವಾಗಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜೋ ಬೈಡನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಇಂದು, ನಾನು ನನ್ನ ಮಗ ಹಂಟರ್‌ ಕ್ಷಮಾದಾನಕ್ಕೆ ಸಹಿ ಹಾಕಿದ್ದೇನೆ. ನಾನು ಅಧಿಕಾರ ವಹಿಸಿಕೊಂಡ ದಿನದಿಂದ ಇದುವರೆಗೆ ನ್ಯಾಯಾಂಗದ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದೇನೆ. ಆದೇ ರೀತಿ ನಡೆದುಕೊಂಡಿದ್ದೇನೆ. ಮಗನನ್ನು ಅನ್ಯಾಯವಾಗಿ ವಿಚಾರಣೆಗೆ ಒಳಪಡಿಸಿದಾಗಲೂ ನನ್ನ ಮಾತನ್ನು ಉಳಿಸಿದ್ದೇನೆ. ಸದ್ಯ ಆತನ (ಹಂಟರ್) ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ಶ್ವೇತಭವನ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೋ ಬೈಡನ್‌ ವಿರುದ್ಧ ಮಂಡನೆಯಾಗಿರುವ ವಾಗ್ದಂಡನೆ ನಿಲುವಳಿ ಕುರಿತ ವಿಚಾರಣೆಯನ್ನು ಅಮೆರಿಕದ ರಿಪಬ್ಲಿಕನ್ ಸಂಸದರು ಈಚೆಗೆ ಆರಂಭಿಸಿದ್ದರು. ಪುತ್ರ ಹಂಟರ್ ಅವರು ವಿದೇಶಗಳಲ್ಲಿ ಹೊಂದಿರುವ ಉದ್ಯಮದೊಂದಿಗೆ ಅಧ್ಯಕ್ಷ ಬೈಡನ್‌ ಹೊಂದಿರುವ ನಂಟಿಗೆ ಸಂಬಂಧಿಸಿ ಈ ವಾಗ್ದಂಡನೆ ನಿಲುವಳಿ ಮಂಡಿಸಲಾಗಿತ್ತು.

‘ಸಂಸತ್‌ನ ಮೇಲುಸ್ತುವಾರಿ, ನ್ಯಾಯಾಂಗ ಕುರಿತ ಸಮಿತಿಗಳ ಅಧ್ಯಕ್ಷರು ವಿಚಾರಣೆ ಆರಂಭಿಸಿದ್ದು, ವಾಗ್ದಂಡನೆ ಪ್ರಕ್ರಿಯೆ ಒಳಗೊಂಡಿರುವ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪ್ರಶ್ನೆಗಳ ಕುರಿತು ಪರಿಶೀಲನೆ ನಡೆಸಿದರು’ ಎಂದು ಮೂಲಗಳು ಹೇಳಿದ್ದವು.

ಬೈಡನ್ ಪುತ್ರ ಹಂಟರ್ ಒಬ್ಬ ಮಾದಕ ವ್ಯಸನಿಯಾಗಿದ್ದಾನೆ. ಆತನನ್ನು ಕ್ಷಮಿಸುವುದಾಗಲಿ ಅಥವಾ ಶಿಕ್ಷೆಯನ್ನು ಕಡಿಮೆ ಮಾಡುವುದಾಗಲಿ ಮಾಡುವುದಿಲ್ಲ ಎಂದು ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ರಿಪಬ್ಲಿಕನ್ ಪಕ್ಷದ ನಾಯಕರು ಪದೇ ಪದೇ ಹೇಳಿದ್ದರು.

ಏನಿದು ಪ್ರಕರಣ?

ಕೆಲವು ವರ್ಷಗಳ ಹಿಂದೆ ಅಕ್ರಮವಾಗಿ ಬಂದೂಕು ಖರೀದಿಸಿದ್ದ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪುತ್ರ ಹಂಟರ್ ಬೈಡನ್‌ ವಿರುದ್ಧ 2023ರ ಸೆಪ್ಟೆಂಬರ್ 15ರಂದು ದೋಷಾರೋಪ ಹೊರಿಸಲಾಗಿತ್ತು.

ಡೆಲವೇರ್‌ನಲ್ಲಿ ಕೋಲ್ಟ್‌ ರಿವಾಲ್ವರ್‌ ಖರೀದಿಸಿದ್ದ ಸಮಯದಲ್ಲಿ ತಾನು ಡ್ರಗ್ಸ್ ಬಳಸುತ್ತಿರಲಿಲ್ಲ ಎಂದು ಹಂಟರ್‌ ಸುಳ್ಳು ಹೇಳಿಕೆ ನೀಡಿದ್ದರು ಎಂದು ಎರಡನೇ ದೋಷಾರೋಪ ಸಲ್ಲಿಸಲಾಗಿತ್ತು.

ಸುಳ್ಳು ಹೇಳಿಕೆಗಳ ಆಧಾರದಲ್ಲಿ ಅಕ್ರಮ ಬಂದೂಕು ಹೊಂದಿದ್ದರು ಎಂಬ ಮೂರನೇ ದೋಷಾರೋಪವು ಹಂಟರ್‌ ಮೇಲಿದೆ. ಇದು ಅವರನ್ನು 10 ವರ್ಷಗಳ ಜೈಲು ಶಿಕ್ಷೆಗೆ ಒಳಪಡಿಸಬಹುದು ಎಂದು ಮೂಲಗಳು ತಿಳಿಸಿದ್ದವು.

2018ರಿಂದ ಹಂಟರ್‌ ಬೈಡನ್‌ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಾಂಗ ಇಲಾಖೆಯ ವಿಶೇಷ ವಕೀಲ ಡೇವಿಡ್‌ ವೈಸ್‌ ದೋಷಾರೋಪ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.