ADVERTISEMENT

ಇಸ್ರೇಲ್ –ಹಮಾಸ್‌ ಸಂಘರ್ಷ: ಪರಿಹಾರ ಕ್ರಮಗಳ ಬಗ್ಗೆ ನೆತನ್ಯಾಹು ಜತೆ ಬೈಡನ್ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜನವರಿ 2024, 2:50 IST
Last Updated 20 ಜನವರಿ 2024, 2:50 IST
<div class="paragraphs"><p>ಜೋ ಬೈಡನ್ ಮತ್ತು&nbsp;ಬೆಂಜಮಿನ್ ನೆತನ್ಯಾಹು</p></div>

ಜೋ ಬೈಡನ್ ಮತ್ತು ಬೆಂಜಮಿನ್ ನೆತನ್ಯಾಹು

   

ವಾಷಿಂಗ್ಟನ್: ಕದನ ವಿರಾಮ ಘೋಷಿಸುವಂತೆ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿಯದೆ ಮತ್ತು ಸಂಯಮ ಕಾಯ್ದುಕೊಳ್ಳಲು ತನ್ನ ಮಿತ್ರ ರಾಷ್ಟ್ರ ಅಮೆರಿಕ ನೀಡಿದ ಸಲಹೆಗೂ ಸೊಪ್ಪುಹಾಕದ ಇಸ್ರೇಲ್‌, ಗಾಜಾ ಮೇಲೆ ಬಾಂಬ್‌ ದಾಳಿ ಮುಂದುವರಿಸಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜತೆಗೆ ಒಂದು ತಿಂಗಳ ಬಳಿಕ ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನ ಪ್ರಕಟಣೆ ತಿಳಿಸಿದೆ.

ADVERTISEMENT

ಸ್ವತಂತ್ರ ಪ್ಯಾಲೆಸ್ಟೀನ್‌ ರಾಷ್ಟ್ರದ ರಚನೆಗೆ ಸಂಬಂಧಿಸಿ ಸಂಭವನೀಯ ಪರಿಹಾರ ಕ್ರಮಗಳ ಬಗ್ಗೆ ನೆತನ್ಯಾಹು ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಜೋ ಬೈಡನ್ ಹೇಳಿದ್ದಾರೆ.

ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿ, ಹಮಾಸ್ ಸೆರೆಯಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ನಡೆಸುತ್ತಿರುವ ಪ್ರಯತ್ನಗಳು ಸೇರಿದಂತೆ ಗಾಜಾದಲ್ಲಿನ ಪರಿಸ್ಥಿತಿ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪ್ಯಾಲೆಸ್ಟೀನ್‌ ನಾಗರಿಕರ ರಕ್ಷಣೆಗೆ ಒತ್ತು ನೀಡುವಂತೆ ಬೈಡನ್‌ ಆಡಳಿತ ಪದೇ ಪದೇ ನೀಡಿದ ಎಚ್ಚರಿಕೆಯನ್ನು ನೆತನ್ಯಾಹು ಅವರು ಪರಿಗಣಿಸಿರಲಿಲ್ಲ. ಬದಲಾಗಿ ಗಾಜಾ ಪಟ್ಟಿ ಮೇಲೆ ದಾಳಿ ಮುಂದುವರಿಸುವಂತೆ ಸೇನಾಪಡೆಗಳಿಗೆ ಸೂಚಿಸಿದ್ದರು. ನೆತನ್ಯಾಹು ನಿರ್ಧಾರದಿಂದ ಈಚೆಗೆ ಇಸ್ರೇಲ್ ಮತ್ತು ಅಮೆರಿಕ ನಡುವಿನ ಬಾಂಧವ್ಯದಲ್ಲಿ ಬಿರುಕಿಗೆ ಕಾರಣವಾಗಿತ್ತು.

ಕಳೆದ 24 ಗಂಟೆಗಳಲ್ಲಿ ಗಾಜಾದಲ್ಲಿ 142 ಪ್ಯಾಲೆಸ್ಟೀನ್‌ ನಾಗರಿಕರು ಸಾವನ್ನಪ್ಪಿದ್ದಾರೆ. 278 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ದಾಳಿಯಲ್ಲಿ ಈವರೆಗೆ 24,762 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.