ADVERTISEMENT

ಲಂಡನ್ | ಸಚಿವ ಜೈಶಂಕರ್ ಬೆಂಗಾವಲು ವಾಹನದತ್ತ ನುಗ್ಗಿದ ಉಗ್ರ: ಭಾರತ ತೀವ್ರ ಖಂಡನೆ

ಖಾಲಿಸ್ತಾನ ಪರ ಗುಂಪಿನಲ್ಲಿದ್ದವನಿಂದ ಕೃತ್ಯ

ಪಿಟಿಐ
Published 6 ಮಾರ್ಚ್ 2025, 5:56 IST
Last Updated 6 ಮಾರ್ಚ್ 2025, 5:56 IST
<div class="paragraphs"><p>ಸಚಿವ ಜೈಶಂಕರ್ ಕಾರಿಗೆ ಅಡ್ಡ ಬಂದ ವ್ಯಕ್ತಿ</p></div>

ಸಚಿವ ಜೈಶಂಕರ್ ಕಾರಿಗೆ ಅಡ್ಡ ಬಂದ ವ್ಯಕ್ತಿ

   

ವಿಡಿಯೊದ ಸ್ಕ್ರೀನ್ ಶಾಟ್

ಲಂಡನ್/ನವದೆಹಲಿ: ಇಲ್ಲಿನಕ ಚಾಥಮ್‌ ಹೌಸ್‌ ಹೊರಗೆ ಪ್ರತಿಭಟಿಸುತ್ತಿದ್ದ ಖಾಲಿಸ್ತಾನ ಪರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಭದ್ರತೆ ಉಲ್ಲಂಘಿಸಿ, ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರ ಬೆಂಗಾವಲು ವಾಹನಗಳತ್ತ ನುಗ್ಗಲು ಯತ್ನಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ADVERTISEMENT

ಆಗಂತುಕನ್ನು ಮೆಟ್ರೊಪಾಲಿಟನ್‌ ಪೊಲೀಸರು ತಕ್ಷಣವೇ ಬದಿಗೆ ಸರಿಸಿದ್ದಾರೆ. ಘಟನೆಗೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ.

‘ಪ್ರತ್ಯೇಕತವಾದಿ ಮತ್ತು ಭಯೋತ್ಪಾದಕರನ್ನು ಒಳಗೊಂಡ ಈ ಸಣ್ಣ ಗುಂಪಿನ ಕೃತ್ಯವನ್ನು ಭಾರತ ತೀವ್ರವಾಗಿ ಖಂಡಿಸಿದೆ.

‘ಚಾಥಮ್‌ ಹೌಸ್‌’, ಬ್ರಿಟನ್‌ನ ಚಿಂತಕರ ಚಾವಡಿಯಾಗಿದ್ದು, ಇಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳ ಕುರಿತು ಚರ್ಚೆ, ಸಂವಾದ ಹಮ್ಮಿಕೊಳ್ಳಲಾಗುತ್ತದೆ.

‘ಚಾಥಮ್‌ ಹೌಸ್‌’ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಜೈಶಂಕರ್‌ ಅವರು, ಸಂಸ್ಥೆಯಿಂದ ನಿರ್ಗಮಿಸುತ್ತಿದ್ದರು. ಇದೇ ವೇಳೆ, ಗುಂಪೊಂದು ಖಾಲಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಾ, ‘ಚಾಥಮ್‌ ಹೌಸ್‌’ ಹೊರಗಡೆ ಪ್ರತಿಭಟಿಸುತ್ತಿತ್ತು. 

ಗುಂಪಿನಲ್ಲಿದ್ದ ವ್ಯಕ್ತಿಯು, ತಡೆಗೋಡೆಯನ್ನು ಏರಿ, ಮುನ್ನುಗ್ಗಿದ್ದಲ್ಲದೇ, ಸಚಿವರಿದ್ದ ಕಾರಿಗೆ ಅಡ್ಡಿಪಡಿಸಲು ಹಾಗೂ ಕಾರಿಗೆ ಅಳವಡಿಸಿದ್ದ ಭಾರತದ ತ್ರಿವರ್ಣ ಧ್ವಜವನ್ನು ಎಳೆಯಲು ಯತ್ನಿಸಿದ್ದಾನೆ.

ಭದ್ರತೆಯನ್ನು ಉಲ್ಲಂಘಿಸಿದ ಘಟನೆಯನ್ನು ಖಂಡಿಸಿರುವ ವಿದೇಶಾಂಗ ಸಚಿವಾಲಯ, ‘ಬ್ರಿಟನ್‌ ಸರ್ಕಾರ ರಾಜತಾಂತ್ರಿಕ ಕರ್ತವ್ಯಗಳನ್ನು ಪಾಲನೆ ಮಾಡಬೇಕು’ ಎಂದು ಆಗ್ರಹಿಸಿದೆ.

ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವಾಲಯ ವಕ್ತಾರ ರಣಧೀರ ಜೈಸ್ವಾಲ್‌,‘ವಿದೇಶಾಂಗ ಸಚಿವರು ಬ್ರಿಟನ್‌ಗೆ ಭೇಟಿ ನೀಡಿದ ವೇಳೆ ಉಂಟಾಗಿರುವ ಭದ್ರತಾ ಲೋಪಕ್ಕೆ ಸಂಬಂಧಿಸಿದ ವಿಡಿಯೊ ದೃಶ್ಯಗಳನ್ನು ನಾವು ನೋಡಿದ್ದೇವೆ’ ಎಂದು ಹೇಳಿದ್ದಾರೆ.

‘ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಸಣ್ಣ ಗುಂಪು ನಡೆಸುತ್ತಿರುವ ಪ್ರಚೋದನಾಕಾರಿ ಚಟುವಟಿಕೆಗಳನ್ನು ಭಾರತ ಖಂಡಿಸುತ್ತದೆ. ಇಂತಹ ವಿಚ್ಛಿದ್ರಕಾರಿ ಶಕ್ತಿಗಳು ಪ್ರಜಾತಾಂತ್ರಿಕ ಸ್ವಾತಂತ್ರ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಖಂಡಿಸುತ್ತೇವೆ’ ಎಂದೂ ಜೈಸ್ವಾಲ್‌ ಹೇಳಿದ್ದಾರೆ.

ಖಂಡನೆ: ಈ ಘಟನೆಯನ್ನು ಭಾರತೀಯ ಬ್ರಿಟಿಷ್ ಸಮುದಾಯಗಳ ಸಂಘಟನೆ ‘ಇನ್‌ಸೈಟ್ ಯುಕೆ’ ಖಂಡಿಸಿದೆ. ವ್ಯಕ್ತಿಯೊಬ್ಬ ಭದ್ರತೆ ಉಲ್ಲಂಘಿಸಿ ಸಚಿವ ಜೈಶಂಕರ್‌ ಅವರ ಕಾರಿನತ್ತ ನುಗ್ಗಲು ಯತ್ನಿಸಿದ ದೃಶ್ಯಗಳಿರುವ ವಿಡಿಯೊವನ್ನು ಕೂಡ ಸಂಘಟನೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. 

ಭದ್ರತೆ ಉಲ್ಲಂಘನೆ ಒಪ್ಪಲಾಗದು: ಬ್ರಿಟನ್

ಲಂಡನ್: ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರು ‘ಚಾಥಮ್ ಹೌಸ್‌’ನಲ್ಲಿ ಕಾರ್ಯಕ್ರಮ ಮುಗಿಸಿ ತೆರಳುವಾಗ ಖಾಲಿಸ್ತಾನ ಪರ ಉಗ್ರನೊಬ್ಬ ಅವರ ಬೆಂಗಾವಲು ವಾಹನಗಳತ್ತ ನುಗ್ಗಲು ಯತ್ನಿಸುವ ವೇಳೆ ಆಗಿರುವ ಭದ್ರತಾ ಉಲ್ಲಂಘನೆಯನ್ನು ಬ್ರಿಟನ್‌ ಗುರುವಾರ ಬಲವಾಗಿ ಖಂಡಿಸಿದೆ. ‘ಸಾರ್ವಜನಿಕ ಕಾರ್ಯಕ್ರಮಗಳಿಗೆ ಇಂತಹ ಪ್ರಯತ್ನಗಳ ಮೂಲಕ ಬೆದರಿಕೆ ಒಡ್ಡುವುದು ಅಥವಾ ಅಡ್ಡಿಪಡಿಸುವುದನ್ನು ಒಪ್ಪಲು ಸಾಧ್ಯವೇ ಇಲ್ಲ’ ಎಂದು ವಿದೇಶ ಕಾಮನ್‌ವೆಲ್ತ್ ಹಾಗೂ ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ವಕ್ತಾರ ಹೇಳಿದ್ದಾರೆ.

‘ರಾಜತಾಂತ್ರಿಕ ಕರ್ತವ್ಯಗಳನ್ನು ಪಾಲಿಸಬೇಕು’ ಎಂಬುದಾಗಿ ಭಾರತದ ವಿದೇಶಾಂಗ ಸಚಿವಾಲಯ ಆಗ್ರಹಿಸಿದ ಬೆನ್ನಲ್ಲೇ ಬ್ರಿಟನ್‌ನಿಂದ ಈ ಹೇಳಿಕೆ ಹೊರಬಿದ್ದಿದೆ. ‘ಶಾಂತಿಯುತವಾಗಿ ಪ್ರತಿಭಟಿಸುವುದನ್ನು ಬ್ರಿಟನ್‌ ಬೆಂಬಲಿಸುತ್ತದೆ. ಆದರೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಅಥವಾ ಬೆದರಿಕೆ ಒಡ್ಡುವ ಪ್ರಯತ್ನಗಳನ್ನು ಒಪ್ಪಲಾಗದು. ಪೊಲೀಸರು ಕ್ಷಿಪ್ರವಾಗಿ ಸ್ಪಂದಿಸಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ರಾಜತಾಂತ್ರಿಕರ ಭದ್ರತೆಯನ್ನು ಖಾತ್ರಿಪಡಿಸಿದ್ದಾರೆ’ ಎಂದು ವಕ್ತಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.