ADVERTISEMENT

ಲಾಹೋರ್ ವಿವಿಯಲ್ಲಿ ಸಂಸ್ಕೃತ ಅಧ್ಯಯನ: 1947ರ ನಂತರ ಪಾಕ್‌ನಲ್ಲಿ ಭಗವದ್ಗೀತೆ ಪಠ್ಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:59 IST
Last Updated 13 ಡಿಸೆಂಬರ್ 2025, 6:59 IST
<div class="paragraphs"><p>ಪಾಕಿಸ್ತಾನದ ಲಾಹೋರ್ ನಿರ್ವಹಣಾ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೋರ್ಸ್‌ನ ಪಠ್ಯ ಪಡೆಯುತ್ತಿರುವ ವಿದ್ಯಾರ್ಥಿನಿ</p></div>

ಪಾಕಿಸ್ತಾನದ ಲಾಹೋರ್ ನಿರ್ವಹಣಾ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೋರ್ಸ್‌ನ ಪಠ್ಯ ಪಡೆಯುತ್ತಿರುವ ವಿದ್ಯಾರ್ಥಿನಿ

   

ಎಕ್ಸ್ ಚಿತ್ರ

ಲಾಹೋರ್: ದೇಶ ವಿಭಜನೆಯ ನಂತರ ಪಾಕಿಸ್ತಾನದ ತರಗತಿಗಳಿಗೆ ಇದೇ ಮೊದಲ ಬಾರಿಗೆ ಸಂಸ್ಕೃತ ಪ್ರವೇಶಿಸಿದೆ. ಲಾಹೋರ್ ನಿರ್ವಹಣಾ ವಿಜ್ಞಾನ ವಿಶ್ವವಿದ್ಯಾಲಯ(LUMS)ದಲ್ಲಿ ಶಾಸ್ತ್ರೀಯ ಭಾಷೆಗಳ ವಿಭಾಗದಲ್ಲಿ ನಾಲ್ಕು ಕ್ರೆಡಿಟ್‌ನ ಕೋರ್ಸ್‌ ಆಗಿ ಸಂಸ್ಕೃತವನ್ನು ಪರಿಚಯಿಸಲಾಗಿದ್ದು, ಮೂರು ತಿಂಗಳ ವಾರಾಂತ್ಯದ ತರಗತಿಗೆ ಸೇರಲು ಆಸಕ್ತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ.

ADVERTISEMENT

ಕೋರ್ಸ್‌ನ ಭಾಗವಾಗಿ ಉರ್ದುಗೆ ಅನುವಾದಗೊಂಡ ‘ಹೇ ಕಥಾ ಸಂಗ್ರಾಮ್‌ ಕಿ’ ಎಂಬ ಮಹಾಭಾರತ ಕಿರುತೆರೆ ಧಾರಾವಾಹಿಯನ್ನು ಮಾಹಿತಿಗಾಗಿ ತೋರಿಸಲಾಗುತ್ತಿದೆ ಎಂದು ವರದಿಯಾಗಿದೆ.

ಈ ಕುರಿತು ಪಾಕಿಸ್ತಾನದ ‘ದಿ ಟ್ರಿಬೂನ್‌’ಗೆ ಮಾಹಿತಿ ನೀಡಿರುವ ಗುರ್ಮಾನಿ ಕೇಂದ್ರದ ನಿರ್ದೇಶಕ ಡಾ. ಅಲಿ ಉಸ್ಮಾನ್ ಖಾಸಿಂ, ‘ಪಂಜಾಬ್‌ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸಂಸ್ಕೃತ ಭಾಷೆಗೆ ಸಂಬಂಧಿಸಿದ ಅಪರೂಪದ ಹಾಗೂ ಅಷ್ಟೇ ಶ್ರೀಮಂತ ಸಾಹಿತ್ಯ ಕೃತಿಗಳಿವೆ. ತಾಳೆಗರಿ ಹಸ್ತಪ್ರತಿಗಳಿವೆ. ವಿದ್ವಾಂಸ ಜೆಸಿಆರ್ ವೂಲ್ನರ್‌ ಎಂಬುವವರು 1930ರಲ್ಲಿ ಸಂಗ್ರಹಿಸಿ ಇಲ್ಲಿ ಇಟ್ಟಿದ್ದರು. ಆದರೆ 1947ರ ನಂತರ ಪಾಕಿಸ್ತಾನದ ಯಾವುದೇ ಶಿಕ್ಷಣ ಸಂಸ್ಥೆಗಳು ಇದರ ಅಧ್ಯಯನಕ್ಕೆ ಆಸಕ್ತಿ ತೋರಲಿಲ್ಲ. ಆದರೆ ಬಹಳಷ್ಟು ವಿದೇಶಿ ವಿದ್ವಾಂಸರು ಇದರ ಪ್ರಯೋಜನ ಪಡೆದಿದ್ದಾರೆ’ ಎಂದು ತಿಳಿಸಿದ್ದಾರೆ.

‘ಸಂಸ್ಕೃತದಲ್ಲಿ ವಿವಿಧ ಕೋರ್ಸ್‌ಗಳನ್ನು ಹಂತ ಹಂತವಾಗಿ ಪರಿಚಯಿಸಲಾಗುವುದು. ಇದರಿಂದ ಮುಂದಿನ 10ರಿಂದ 15 ವರ್ಷಗಳಲ್ಲಿ ಮಹಾಭಾರತ ಮತ್ತು ಭವಗದ್ಗೀತೆಗೆ ಸಂಬಂಧಿಸಿದ ವಿದ್ವಾಂಸರು ಪಾಕಿಸ್ತಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಗುವಂತೆ ಮಾಡುವುದು ನಮ್ಮ ಗುರಿ’ ಎಂದು ಡಾ. ಖಾಸಿಮ್ ತಿಳಿಸಿದ್ದಾರೆ.

ಲಾಹೋರ್ ನಿರ್ವಹಣಾ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತವನ್ನು ಪರಿಚಯಿಸುವಲ್ಲಿ ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನ ಪ್ರಾಧ್ಯಾಪಕ ಡಾ. ಶಹೀದ್ ರಶೀದ್ ಅವರ ಪ್ರಯತ್ನ ಬಹಳಷ್ಟಿದೆ ಎಂದಿದ್ದಾರೆ.

ಸಂಸ್ಕೃತದ ವೈಯ್ಯಾಕರಣಿ ಪಾಣಿನಿಯ ಊರು ಪಾಕಿಸ್ತಾನದಲ್ಲಿ

‘ಮನುಷ್ಯರ ಜ್ಞಾನ ವೃದ್ಧಿಗೆ ಶಾಸ್ತ್ರೀಯ ಭಾಷೆಗಳ ಪಾತ್ರ ಮಹತ್ವದ್ದು. ಅರೆಬಿಕ್ ಮತ್ತು ಪರ್ಷಿಯನ್ ಭಾಷೆಗಳನ್ನು ಕಲಿತ ನಾನು, ನಂತರ ಸಂಸ್ಕೃತವನ್ನು ಕಲಿತೆ. ಇದಕ್ಕಾಗಿ ಕೇಂಬ್ರಿಜ್‌ನ ಸಂಸ್ಕೃತ ವಿದ್ವಾಂಸರಾದ ಅಂಟೋನಿಯಾ ರುಪೆಲ್ ಅವರ ಮಾರ್ಗದರ್ಶನ ಪಡೆದೆ. ಆಸ್ಟ್ರೇಲಿಯಾದ ಭಾರತಶಾಸ್ತ್ರ ವಿಭಾಗದ ಮೆಕಾಮಸ್ ಟೇಲರ್‌ ಅವರಿಂದಲೂ ಸಾಕಷ್ಟು ಕಲಿತಿದ್ದೇನೆ. ಶಾಸ್ತ್ರೀಯ ಸಂಸ್ಕೃತದ ವ್ಯಾಕರಣ ಕಲಿಯಲು ನನಗೆ ಬರೋಬ್ಬರಿ ಒಂದು ವರ್ಷ ಹಿಡಿಯಿತು. ಈಗಲೂ ಕಲಿಯುತ್ತಲೇ ಇದ್ದೇನೆ’ ಎಂದು ಡಾ. ರಶೀದ್ ಹೇಳಿದ್ದಾರೆ.

ಸಂಸ್ಕೃತ ಏಕೆ ಆಯ್ಕೆ ಮಾಡಿಕೊಂಡೆ ಎಂಬುದು ಜನರಿಂದ ನನಗೆ ಎದುರಾಗುವ ಸಾಮಾನ್ಯ ಪ್ರಶ್ನೆ. ನಾವೇಕೆ ಕಲಿಯಬಾರದು ಎಂಬುದು ಅವರಿಗೆ ನನ್ನ ಮರು ಪ್ರಶ್ನೆ. ಸಂಸ್ಕೃತ ಎಂಬುದು ಈ ಇಡೀ ಪ್ರದೇಶವನ್ನು ಒಗ್ಗೂಡಿಸಿದ್ದ ಭಾಷೆ. ಸಂಸ್ಕೃತದ ವೈಯ್ಯಾಕರಣಿ ಪಾಣಿನಿಯ ಮೂಲ ಊರು ಪಾಕಿಸ್ತಾನದಲ್ಲಿದೆ. ಸಿಂಧೂ ನದಿ ನಾಗರೀಕತೆ ಸಂದರ್ಭದಲ್ಲಿ ಸಂಸ್ಕೃತದ ಸಾಕಷ್ಟು ಸಾಹಿತ್ಯ ರಚನೆಯಾಗಿದೆ. ಸಂಸ್ಕೃತ ಎಂಬುದು ಸಂಸ್ಕತಿಯ ಶಿಖರದಂತೆ. ಅದನ್ನು ನಾವು ಕಲಿಯಬೇಕು. ಸಂಸ್ಕೃತ ಎಂಬುದು ಯಾವುದೋ ಒಂದು ಪ್ರಾಂತ್ಯಕ್ಕೆ ಸೇರಿದ್ದಲ್ಲ, ನಮಗೂ ಸೇರಿದ್ದು’ ಎಂದಿದ್ದಾರೆ.

ಏಷ್ಯಾದ ಪ್ರತಿಯೊಂದು ರಾಷ್ಟ್ರವೂ ತಮ್ಮಲ್ಲಿರುವ ಶಾಸ್ತ್ರೀಯ ಭಾಷೆಗಳನ್ನು ಪರಸ್ಪರ ಕಲಿತರೆ ಈ ಭಾಗದಲ್ಲಿ ಸೌಹಾರ್ದತೆ ಇನ್ನಷ್ಟು ಹೆಚ್ಚಾಗಲಿದೆ. ಭಾರತದಲ್ಲಿರುವ ಹಿಂದೂಗಳು ಹಾಗೂ ಸಿಖ್ಖರು ಅರೆಬಿಕ್‌ ಕಲಿತರೆ ಹಾಗೆಯೇ ಪಾಕಿಸ್ತಾನದಲ್ಲಿರುವ ಮುಸಲ್ಮಾನರು ಸಂಸ್ಕೃತ ಕಲಿತರೆ ದಕ್ಷಿಣ ಏಷ್ಯಾದಲ್ಲೇ ಹೊಸ ಭರವಸೆಯ ದಿನಗಳ ಆರಂಭವಾಗಲಿವೆ. ಇಲ್ಲಿ ಭಾಷೆಗಳ ಸೇತುವೆ ಗಡಿಯನ್ನೇ ತೊಡೆದುಹಾಕಲಿವೆ’ ಎಂದು ಡಾ. ರಶೀದ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.