ADVERTISEMENT

ಹಣಕಾಸು ಸಚಿವ ಸ್ಥಾನದಿಂದ ತಮ್ಮನನ್ನು ವಜಾಗೊಳಿಸಿದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ

ಪಿಟಿಐ
Published 4 ಏಪ್ರಿಲ್ 2022, 10:03 IST
Last Updated 4 ಏಪ್ರಿಲ್ 2022, 10:03 IST
ಬಸಿಲ್‌ ರಾಜಪಕ್ಸ
ಬಸಿಲ್‌ ರಾಜಪಕ್ಸ    

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಹಣಕಾಸು ಸಚಿವ ಮತ್ತು ತಮ್ಮನೂ ಆದ ಬಸಿಲ್‌ ರಾಜಪಕ್ಸ ಅವರನ್ನು ಮಂತ್ರಿಮಂಡಲದಿಂದ ಸೋಮವಾರ ವಜಾಗೊಳಿಸಿದ್ದಾರೆ. ಜತೆಗೆ, ಸಾರ್ವಜನಿಕ ಆಕ್ರೋಶವನ್ನು ಎದುರಿಸಲು ‘ಒಗ್ಗಟ್ಟಿನ ಕ್ಯಾಬಿನೆಟ್‌’ನ ಪ್ರಸ್ತಾವವನ್ನು ಅವರು ವಿರೋಧ ಪಕ್ಷಗಳ ಎದುರಿಗೆ ಇಟ್ಟಿದ್ದಾರೆ.

ಪ್ರಸ್ತುತ ಎದುರಾಗಿರುವ ವಿದೇಶಿ ವಿನಿಮಯ ಬಿಕ್ಕಟ್ಟನ್ನು ಎದುರಿಸುವ ಸಲುವಾಗಿ ಶ್ರೀಲಂಕಾಕ್ಕೆ ಆರ್ಥಿಕ ಪರಿಹಾರ ಪ್ಯಾಕೇಜ್ ನೀಡುವಂತೆ ಕೋರಿ ಬಸಿಲ್ ರಾಜಪಕ್ಸ ಅವರು ಭಾರತದೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು. ಜತೆಗೆ, ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಅಗತ್ಯವಿರುವ ಪರಿಹಾರಾತ್ಮಕ ಪ್ಯಾಕೇಜ್‌ಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯೊಂದಿಗೆ ಮಾತುಕತೆ ನಡೆಸಲು ಬಸಿಲ್ ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದರು. ಹೀಗಿರುವಾಗಲೇ ಅವರನ್ನು ಹಣಕಾಸು ಸಚಿವ ಸ್ಥಾನದಿಂದ ಹೊರದಬ್ಬಲಾಗಿದೆ.

ADVERTISEMENT

ಕಾನೂನು ಸಚಿವರಾಗಿದ್ದ ಅಲಿ ಸಬ್ರಿ ಅವರು ಬಸಿಲ್‌ ಅವರಿಂದ ತೆರವಾದ ಸ್ಥಾನವನ್ನು ವಹಿಸಿಕೊಂಡಿದ್ದಾರೆ.

ಆಡಳಿತಾರೂಢ ಮೈತ್ರಿಕೂಟ ‘ಶ್ರೀಲಂಕಾ ಪುದುಜನ ಪೆರಮುನ’ (ಎಸ್‌ಎಲ್‌ಪಿಪಿ)ಯಲ್ಲಿ ಆಂತರಿಕವಾಗಿ ಬೆಸಿವಿಲ್‌ ವಿರುದ್ಧ ಆಕ್ರೋಶಗಳಿದ್ದವು. ಕಳೆದ ತಿಂಗಳು ಬಸಿಲ್‌ ಅವರನ್ನು ಟೀಕಿಸಿದ ಕಾರಣಕ್ಕೇ ಇಬ್ಬರು ಸಚಿವರನ್ನು ಮಂತ್ರಿಮಂಡಲದಿಂದ ಕಿತ್ತುಹಾಕಲಾಗಿತ್ತು.

ಭಾನುವಾರ ರಾತ್ರಿ ಶ್ರೀಲಂಕಾ ಸರ್ಕಾರದ 26 ಮಂತ್ರಿಗಳು ರಾಜೀನಾಮೆ ಸಲ್ಲಿಸಿದ್ದರು. ಇದಾದ ನಂತರ, ಮೂವರು ಹೊಸ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದಕ್ಕೂ ಮೊದಲು ರಾಜಪಕ್ಸ ಅವರು ವಿರೋಧ ಪಕ್ಷಗಳನ್ನೂ ಒಳಗೊಂಡ ‘ಒಗ್ಗಟ್ಟಿನ ಕ್ಯಾಬಿನೆಟ್‌’ ಅನ್ನು ಪ್ರಸ್ತಾಪಿಸಿದ್ದರು.

ಸದ್ಯ, ಜಿ ಎಲ್ ಪೀರಿಸ್ ವಿದೇಶಾಂಗ ಸಚಿವರಾಗಿಯೂ, ದಿನೇಶ್ ಗುಣವರ್ಧನ್ ಶಿಕ್ಷಣ ಸಚಿವರಾಗಿಯೂ, ಜಾನ್‌ಸ್ಟನ್ ಫರ್ನಾಂಡೋ ಅವರು ಸಾರಿಗೆ ಸಚಿವರಾಗಿಯೂ ಅಧಿಕಾರ ಸ್ವೀಕರಿಸಿದ್ದಾರೆ.

ವಿದೇಶಿ ವಿನಿಮಯ ಬಿಕ್ಕಟ್ಟು, ಬಾಕಿ ಪಾವತಿ ಸಮಸ್ಯೆಗಳಿಂದ ಉಂಟಾದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾದ ಆಡಳಿತಾರೂಢ ರಾಜಪಕ್ಸ ಕುಟುಂಬದ ವಿರುದ್ಧ ಶ್ರೀಲಂಕಾದಲ್ಲಿ ಆಂದೋಲನಗಳು ಹುಟ್ಟಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.