ADVERTISEMENT

ಶೆಲ್ ದಾಳಿ: ಉಕ್ರೇನ್‌ನಲ್ಲಿ 9 ಜನರು, 12ಕ್ಕೂ ಹೆಚ್ಚು ಯೋಧರ ಸಾವು

ರಾಯಿಟರ್ಸ್
Published 19 ಮಾರ್ಚ್ 2022, 16:06 IST
Last Updated 19 ಮಾರ್ಚ್ 2022, 16:06 IST
   

ಕೀವ್‌:ದಕ್ಷಿಣ ಉಕ್ರೇನ್‌ನ ಝಪೊರಿಝಿಯಾ ನಗರದ ಉಪನಗರಗಳ ಮೇಲೆ ಶುಕ್ರವಾರ ರಾತ್ರಿ ರಷ್ಯಾ ಪಡೆಗಳು ನಡೆಸಿರುವ ಶೆಲ್ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. 17 ಜನರು ಗಾಯಗೊಂಡಿದ್ದಾರೆ ಎಂದು ನಗರದ ಉಪ ಮೇಯರ್ ಅನಾಟೊಲಿ ಕುರ್ಟೀವ್ ಶನಿವಾರ ತಿಳಿಸಿದ್ದಾರೆ.

ಝಪೊರಿಝಿಯಾದಲ್ಲಿ 38 ಗಂಟೆಗಳ ಕರ್ಫ್ಯೂ ಘೋಷಿಸಲಾಗಿದೆ. ರಷ್ಯಾದ ಪಡೆಗಳು ಫಿರಂಗಿ, ಟ್ಯಾಂಕ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ರಾಕೆಟ್‌ಗಳಿಂದ ದಾಳಿ ಮಾಡುತ್ತಿವೆ ಎಂದು ಕುರ್ತೀವ್ ತಿಳಿಸಿದ್ದಾರೆ.

12 ಯೋಧರ ಸಾವು

ADVERTISEMENT

ರಷ್ಯಾದ ಪಡೆಗಳು ಶುಕ್ರವಾರ ಮೈಕೊಲೈವ್‌ ನಗರದಲ್ಲಿ ಸೇನಾ ಬ್ರಿಗೇಡ್ ಪ್ರಧಾನ ಕಚೇರಿಯ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 12ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬದುಕುಳಿದಿರುವ ಯೋಧ ಯೆವ್‌ಗೆನ್‌ ಈ ಕಚೇರಿಯಲ್ಲಿ 200 ಮಂದಿ ಇದ್ದೆವು ಎಂದಿದ್ದಾರೆ. ಬದುಕುಳಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳದಲ್ಲಿ ನೂರಾರು ಯೋಧರ ಶವಗಳು ಬಿದ್ದಿವೆ ಎಂದು ಸೇನಾ ವಕ್ತಾರೆ ತಿಳಿಸಿದ್ದಾರೆ.

7 ಮಂದಿ ಸಾವು

ರಾಜಧಾನಿ ಕೀವ್‌ ನಗರದ ಮಕರಿವ್ ಮೇಲೆ ರಷ್ಯಾ ಪಡೆಗಳು ಶುಕ್ರವಾರ ನಡೆಸಿದ ಫಿರಂಗಿ ದಾಳಿಗೆ ಏಳು ಜನರು ಮೃತಪಟ್ಟಿದ್ದು, ಗಾಯಗೊಂಡಿರುವ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಶನಿವಾರ ತಿಳಿಸಿದ್ದಾರೆ. ಆದರೆ, ಇದನ್ನು ಅಲ್ಲಗಳೆದಿರುವ ರಷ್ಯಾ, ನಾಗರಿಕರ ಮೇಲೆ ದಾಳಿ ನಡೆಸಿಲ್ಲ ಎಂದಿದೆ.

ಯುರೋಪಿನ ಅತಿ ದೊಡ್ಡ ಉಕ್ಕಿನ ಸ್ಥಾವರ ನಾಶ

ಮರಿಯುಪೋಲ್‌ಗೆ ಮುತ್ತಿಗೆ ಹಾಕಿರುವ ರಷ್ಯಾ ಪಡೆಗಳು ಯುರೋಪಿನ ಅತಿದೊಡ್ಡ ಉಕ್ಕಿನ ಸ್ಥಾವರ ‘ಅಜೋವ್‌ಸ್ಟಾಲ್‌’ ಮೇಲೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಉಕ್ರೇನ್ ಪಡೆಗಳೊಂದಿಗೆ ಭೀಕರ ಕಾಳಗ ನಡೆಸಿದ್ದು, ಉಕ್ಕಿನ ಸ್ಥಾವರವನ್ನು ನಾಶಪಡಿಸಿವೆ.

‘ಅಜೋವ್‌ಸ್ಟಾಲ್‌ ಉಳಿಸಿಕೊಳ್ಳಲು ಉಕ್ರೇನ್‌ ಪಡೆ ತೀವ್ರ ಪ್ರತಿರೋಧ ತೋರಿತು. ಆದರೆ, ಈ ಆರ್ಥಿಕ ದೈತ್ಯ ಘಟಕವನ್ನು ನಾವು ಕಳೆದುಕೊಂಡಿದ್ದೇವೆ. ರಷ್ಯಾ ಪಡೆಗಳ ದಾಳಿಗೆ ಸಿಕ್ಕಿ, ಯುರೋಪಿನ ದೈತ್ಯ ಉಕ್ಕು ಘಟಕ ನಾಶವಾಗಿದೆ’ ಎಂದು ಉಕ್ರೇನ್‌ನ ಆಂತರಿಕ ಸಚಿವರ ಸಲಹೆಗಾರ ವಡಿಮ್ ಜಿನಿಶಿಯಂಕ ಶನಿವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.