ಸರ್ಕಾರದ ನೀತಿ ವಿರುದ್ಧ ನೇಪಾಳಿಗರ ಪ್ರತಿಭಟನೆ
– ರಾಯಿಟರ್ಸ್ ಚಿತ್ರ
ಕಠ್ಮಂಡು: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವ್ಯಾಟ್ಸ್‌ಆ್ಯಪ್ ಹಾಗೂ ಎಕ್ಸ್ ಸಹಿತ ಎರಡು ಡಜನ್‌ಗೂ ಅಧಿಕ ಸಾಮಾಜಿಕ ಜಾಲತಾಣಗಳಿಗೆ ನೇಪಾಳ ಸರ್ಕಾರ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ನಡೆದ ಪ್ರತಿಭಟನೆಗಳಿಗೆ 16ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
26 ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ಆ್ಯಪ್‌ಗಳಿಗೆ ಪ್ರಧಾನಿ ಕೆ.ಪಿ ಶರ್ಮಾ ಓಲಿ ನೇತೃತ್ವದ ಸರ್ಕಾರ ನಿರ್ಬಂಧ ವಿಧಿಸಿದೆ. ಹೊಸ ನಿಯಮಗಳನ್ನು ಪಾಲಿಸದ ಕಾರಣ ಈ ಕ್ರಮ ತೆಗೆದುಕೊಂಡಿದ್ದಾಗಿ ಸರ್ಕಾರ ಹೇಳಿದೆ.
ರೆಡ್ಡಿಟ್, ಲಿಂಕ್ಡ್ ಇನ್, ಪ್ರಿಂಟರೆಸ್ಟ್ ಹಾಗೂ ಸಿಗ್ನಲ್ ಕೂಡ ನಿಷೇಧಕ್ಕೆ ಒಳಗಾಗಿವೆ. ಟಿಕ್ ಟಾಕ್ ಸೇರಿ ಐದು ಕಂಪನಿಗಳು ಮಾತ್ರ ನಿಯಮ ಪಾಲಿಸಿದ್ದು, ನಿಷೇಧಕ್ಕೊಳಗಾಗಿಲ್ಲ.
ಗುರುವಾರ (ಸೆ.4) ರ ಮಧ್ಯರಾತ್ರಿ ಬಳಿಕ ಈ ನಿಷೇಧ ಜಾರಿಗೆ ಬಂದಿತ್ತು. ಇದರ ಬೆನ್ನಲ್ಲೇ ದೇಶದಾದ್ಯಂತ ಅವ್ಯವಸ್ಥೆ ಉಂಟಾದವು. ವ್ಯಾಪಾರ–ವಹಿವಾಟು, ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿತು. ಜನರ ಬೇರೆ ದೇಶದಲ್ಲಿರುವ ತಮ್ಮ ಪ್ರೀತಿ ಪಾತ್ರರೊಂದಿಗೆ ಸಂವಹನ ಮಾಡದ ಪರಿಸ್ಥಿತಿ ನಿರ್ಮಾಣವಾಯಿತು.
ಸೋಮವಾರ ಜನರ ಆಕ್ರೋಶ ಪ್ರತಿಭಟನಾ ರೂಪ ಪಡೆಯಿತು. ರಾಜಧಾನಿ ಕಠ್ಮಂಡುವಿನ ಬೀದಿಗಳಲ್ಲಿ ಲಕ್ಷಾಂತರ ಜನ ಸೇರಿ ಈ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರಲ್ಲಿ ಹೆಚ್ಚಿನವರು ಯುವಕರಾಗಿದ್ದರು.
ಪ್ರತಿಭಟನಾಕಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಬ್ಯಾರಿಕೇಡ್‌ಗಳನ್ನು ಹಾರಿ ಸಂಸತ್ ಕಟ್ಟಡಕ್ಕೆ ನುಗ್ಗಲು ಯತ್ನಿಸಿದ್ದಾರೆ. ಪೊಲೀಸರು ಅಶ್ರುವಾಯು, ಲಾಠಿ ಚಾರ್ಜ್, ರಬ್ಬರ್ ಬುಲೆಟ್ ಹಾಗೂ ಜಲಫಿರಂಗಿ ಬಳಸಿ ಆಕ್ರೋಶಿತರನ್ನು ತಡೆಹಿಡಿದಿದ್ದಾರೆ.
ಪೊಲೀಸರು ಹಾರಿಸಿದ ಗುಂಡಿನಿಂದ ತಲೆ ಹಾಗೂ ಎದೆಗೆ ಗಾಯಗೊಂಡವರು ಸೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕನಿಷ್ಠ 16 ಮಂದಿ ಸಾವಿಗೀಡಾಗಿದ್ದಾರೆ ಎಂದು ನೇಪಾಳಿ ಪೊಲೀಸರು ಮಾಹಿತಿ ನೀಡಿದ್ದಾರೆ. ನಾಗರಿಕ ಸೇವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ಗಾಯಗೊಂಡಿದ್ದ ನಾಲ್ವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ರಾಜಧಾನಿಯಾದ್ಯಂತ ಸೋಮವಾರ ರಾತ್ರಿ 10 ಗಂಟೆವೆರೆಗೆ ಸರ್ಕಾರ ಕರ್ಫ್ಯೂ ಘೋಷಿಸಿದೆ.
ಕೋರ್ಟ್ ಆದೇಶದ ಬಳಿಕ ನೋಂದಣಿ ಮಾಡಿಕೊಳ್ಳಲು ಸಾಮಾಜಿಕ ಜಾಲತಾಣ ಕಂಪನಿಗಳಿಗೆ 7 ದಿನಗಳ ಕಾಲಾವಕಾಶ ನೀಡಲಾಗಿತ್ತು. ಕೋರ್ಟ್ ಆದೇಶವವನ್ನು ಪಾಲಿಸಲು ವಿಫಲವಾದ ಕಂಪನಿಗಳಿಗೆ ನಿರ್ಬಂಧ ಹೇರಲು ನೋಟಿಸ್ ಹೊರಡಿಸಲಾಯಿತು ಎಂದು ನೇಪಾಳದ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.
ದ್ವೇಷ ಭಾಷಣ, ಸುಳ್ಳು ಸುದ್ದಿ ಹಾಗೂ ಆನ್‌ಲೈನ್ ಅಪರಾಧಗಳನ್ನು ನಿಗ್ರಹಿಸಲು ಹೊಸ ನಿಯಮಾವಳಿಗಳನ್ನು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಸರ್ಕಾರದ ಈ ನಿರ್ಧಾರನ್ನು ಅಂತರರಾಷ್ಟ್ರೀಯ ಹಕ್ಕುಗಳ ಸಂಸ್ಥೆಗಳು ಟೀಕಿಸಿವೆ. ‘ಪತ್ರಿಕಾ ಸ್ವಾತಂತ್ರ್ಯಕ್ಕೆ ಈ ನಿರ್ಧಾರ ಅಪಾಯಕಾರಿ’ ಎಂದು ಪತ್ರಕರ್ತರ ರಕ್ಷಣಾ ಸಮಿತಿ ಎನ್ನುವ ಸರ್ಕಾರೇತರ ಸಂಸ್ಥೆ ಹೇಳಿದೆ.
ಸಾಮಾಜಿಕ ಜಾಲತಾಣಗಳಿಗೆ ನಿಷೇಧ ಹೇರಿದ ಬಳಿಕ ಸಾಮಾನ್ಯ ನೇಪಾಳಿ ಮಕ್ಕಳ ಒದ್ದಾಟ ಹಾಗೂ ಶ್ರೀಮಂತ ರಾಜಕಾರಣಿಳ ಮಕ್ಕಳ ಐಷಾರಾಮಿ ಜೀವನಶೈಲಿಯನ್ನು ಹೋಲಿಕೆ ಮಾಡುವ ವಿಡಿಯೊಗಳು ಟಿಕ್‌ಟಾಕ್‌ನಲ್ಲಿ ಹರಿದಾಡುತ್ತಿವೆ.
ಭಾನುವಾರ ಕಠ್ಮಂಡುವಿನಲ್ಲಿ ಜಮಾಯಿಸಿದ ಹಲವು ಪತ್ರಕರ್ತರು, ಈ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ‘ಸಾಮಾಜಿಕ ಜಾಲತಾಣಗಳ ನಿಷೇಧ ಬೇಡ, ಧ್ವನಿಗಳನ್ನು ಹತ್ತಿಕ್ಕುವುದು ಬೇಡ’, ‘ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು’, ‘ಪ್ರಜಾಪ್ರಭುತ್ವ ಛಿದ್ರವಾಯಿತು, ಸರ್ವಾಧಿಕಾರ ಮತ್ತೆ ಮರಳಿತು’ ಎಂದು ಘೋಷಣೆ ಕೂಗಿದ್ದಾರೆ.
ದೇಶವನ್ನು ದುರ್ಬಲಗೊಳಿಸುವುದನ್ನು ಸಹಿಸಲಸಾಧ್ಯ ಎಂದು ಸೋಮವಾರ ಪ್ರಧಾನಿ ಹೇಳಿದ್ದಾರೆ. ಕೆಲವರು ಕೆಲಸ ಕಳೆದುಕೊಳ್ಳುವುದು ದೇಶದ ಸಾರ್ವಭೌಮತೆಗಿಂದ ಮಿಗಿಲಲ್ಲ. ಕಾನೂನನ್ನು ಧಿಕ್ಕರಿಸುವುದು, ಸಂವಿಧಾನವನ್ನು ಕಡೆಗಣಿಸುವುದು ಮತ್ತು ರಾಷ್ಟ್ರೀಯ ಘನತೆ, ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಅಗೌರವಿಸುವುದನ್ನು ಸ್ವೀಕರಿಸುವುದು ಹೇಗೆ? ಎಂದು ಓಲಿ ಭಾನುವಾರ ಮಾಡಿದ ಭಾಷಣದಲ್ಲಿ ಹೇಳಿದ್ದರು.
ನೇಪಾಳದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ಇಲ್ಲದಿದ್ದರೂ, ಓಲಿ ಸರ್ಕಾರದ ನಿರ್ಬಂಧ ಹೆಚ್ಚಾಗಿದ್ದು, ಕಳವಳಕ್ಕೆ ಕಾರಣ ಎಂದು ಟೀಕಾಕಾರರು ಹೇಳಿದ್ದಾರೆ. 2023ರಲ್ಲಿ ದ್ವೇಷ ಭಾಷಣ ಹಾಗೂ ಸೈಬರ್ ಅಪರಾಧದ ಕಾರಣ ಕೊಟ್ಟು ಟಿಕ್‌ಟಾಕ್‌ಗೆ 9 ತಿಂಗಳು ನಿಷೇಧ ಹೇರಲಾಗಿತ್ತು. ಸರ್ಕಾರದೊಂದಿಗೆ ನೋಂದಣಿ ಮಾಡಿದ ಬಳಿಕ ಮತ್ತೆ ಕಾರ್ಯಾಚರಣೆಗೆ ಅವಕಾಶ ನೀಡಲಾಗಿತ್ತು.
ಪತ್ರಿಕಾ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಮೂಗುದಾರ ಹಾಕುವ ಹಲವು ಕರಡು ಮಸೂದೆಗಳು ನೇಪಾಳ ಸಂಸತ್ತಿನಲ್ಲಿದೆ. ನಿಮಯ ಉಲ್ಲಂಘನೆಯನ್ನು ರಾಷ್ಟ್ರೀಯ ಹಿತಾಸಕ್ತಿಗೆ ವಿರೋಧ ಎಂದು ಪರಿಗಣಿಸಿ, ನಾಗರಿಕರಿಗೆ ದಂಡ ಹಾಗೂ ಜೈಲು ಶಿಕ್ಷೆ, ಪತ್ರಿಕೆಗಳನ್ನು ಮುಚ್ಚಲು ಸರ್ಕಾರಕ್ಕೆ ಅಧಿಕಾರ ಹಾಗೂ ಪತ್ರಕರ್ತರ ಮಾನ್ಯತೆ ರದ್ದು ಮಾಡುವ ಅಧಿಕಾರ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.