ADVERTISEMENT

ರಶ್ದಿ ಮೇಲಿನ ದಾಳಿ ಪೂರ್ವಯೋಜಿತ, 10 ಬಾರಿ ಚಾಕುವಿನಿಂದ ಇರಿದೆ: ಆರೋಪಿ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2022, 2:22 IST
Last Updated 14 ಆಗಸ್ಟ್ 2022, 2:22 IST
ಸಲ್ಮಾನ್‌ ರಶ್ದಿ
ಸಲ್ಮಾನ್‌ ರಶ್ದಿ    

ಷಟೌಕ್ವಾ (ಅಮೆರಿಕ): ಸಲ್ಮಾನ್ ರಶ್ದಿ (75) ಅವರ ಮೇಲೆ ನಡೆಸಿದ ದಾಳಿ ಪೂರ್ವಯೋಜಿತವಾಗಿದ್ದು, ಅವರ ಮೇಲೆ 10 ಬಾರಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.

ರಶ್ದಿ ಅವರನ್ನು ಇರಿದ ವ್ಯಕ್ತಿಯನ್ನು ಹಾದಿ ಮಟರ್‌ (24) ಎಂದು ಗುರುತಿಸಲಾಗಿದೆ. ಈತ ನ್ಯೂಜೆರ್ಸಿಯ ಫೇರ್‌ಫೀಲ್ಡ್‌ನವನು. ಆತನ ವಿರುದ್ಧ ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣ ದಾಖಲಿಸಿರುವ ನ್ಯೂಯಾರ್ಕ್ ಪೊಲೀಸರು ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಸಲ್ಮಾನ್ ರಶ್ದಿ ಅವರ ಮೇಲೆ ನಡೆಸಿದ ದಾಳಿ ಪೂರ್ವಯೋಜಿತವಾಗಿದೆ. ಅವರ ಮೇಲೆ 10 ಬಾರಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದೇನೆ ಎಂದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ವಾದ –ಪ್ರತಿವಾದ ಅಲಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂಡೂಡಿದೆ.

ರಶ್ದಿ ಅವರ ಸ್ಥಿತಿ ಗಂಭೀರವಾಗಿಯೇ ಇದೆ. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಮತ್ತು ಅವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳಬಹುದು. ತೋಳಿನ ನರಗಳು ತುಂಡಾಗಿವೆ ಮತ್ತು ಯಕೃತ್‌ಗೆ ಹಾನಿಯಾಗಿದೆ ಎಂದು ರಶ್ದಿ ಅವರ ಏಜೆಂಟ್ ಆಂಡ್ರ್ಯೂ ವೈಲಿ ಹೇಳಿದ್ದಾರೆ.

ರಶ್ದಿ ಅವರ ಮೇಲಿನ ದಾಳಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸೇರಿದಂತೆ ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.