ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ವಿರುದ್ಧ ನಡೆಸಿದ ಸೇನಾ ಕಾರ್ಯಾಚರಣೆಯ ಯಶಸ್ಸನ್ನು ಸಂಭ್ರಮಿಸಿದ್ದಾರೆ. ಅಲ್ಲದೇ, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಟ್ರಂಪ್ ಅವರ ಹೆಸರನ್ನು ನಾಮನಿರ್ದೇಶನ ಮಾಡುವುದಾಗಿ ನೆತನ್ಯಾಹು ಸೋಮವಾರ ಹೇಳಿದ್ದಾರೆ.
ಇರಾನ್ ವಿರುದ್ಧದ ಕಾರ್ಯಾಚರಣೆಯ ಗೆಲುವನ್ನು ಸಂಭ್ರಮಿಸುವ ಉದ್ದೇಶದಿಂದ ಶ್ವೇತಭವನದಲ್ಲಿ ಹಮ್ಮಿಕೊಂಡಿದ್ದ ಭೋಜನಕೂಟದಲ್ಲಿ ನೆತನ್ಯಾಹು ಅವರು ಈ ವಿಚಾರವನ್ನು ಟ್ರಂಪ್ ಅವರಿಗೆ ತಿಳಿಸಿದರು.
‘ಟ್ರಂಪ್ ಅವರು ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಶ್ರಮಿಸುತ್ತಿದ್ದು, ಒಂದಾದ ನಂತರ ಒಂದು ದೇಶ, ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕೆ, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅವರ ನಾಮನಿರ್ದೇಶನ ಮಾಡುತ್ತಿದ್ದೇನೆ’ ಎಂದ ನೆತನ್ಯಾಹು, ಈ ಕುರಿತು ನೊಬೆಲ್ ಸಮಿತಿಗೆ ತಾವು ಕಳುಹಿಸುತ್ತಿರುವ ಪತ್ರದ ಪ್ರತಿಯನ್ನು ಟ್ರಂಪ್ ಅವರಿಗೆ ಇದೇ ವೇಳೆ ನೀಡಿದರು.
ಗಾಜಾ ವಿರುದ್ಧ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದಿಂದ ಇಸ್ರೇಲ್ ನಡೆಸುತ್ತಿರುವ ದಾಳಿ ಕುರಿತು ಚರ್ಚಿಸಿದ ಟ್ರಂಪ್ ಹಾಗೂ ನೆತನ್ಯಾಹು, 60 ದಿನಗಳ ಕದನ ವಿರಾಮ ಘೋಷಣೆ ಬಗ್ಗೆಯೂ ಮಾತುಕತೆ ನಡೆಸಿದರು.
ಹಮಾಸ್ ತಾನು ಒತ್ತೆಯಾಳಾಗಿ ಇರಿಸಿಕೊಂಡಿರುವ ಇಸ್ರೇಲ್ ಪ್ರಜೆಗಳನ್ನು ಶೀಘ್ರವೇ ಬಿಡುಗಡೆ ಮಾಡುವ ವಿಶ್ವಾಸವನ್ನು ಟ್ರಂಪ್ ವ್ಯಕ್ತಪಡಿಸಿದರು.
‘ಹೊಸ ಶಕೆ’: ಶ್ವೇತಭವನದಲ್ಲಿ ಭೋಜನಕೂಟ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ ಟ್ರಂಪ್ ಹಾಗೂ ನೆತನ್ಯಾಹು,‘ಇರಾನ್ ವಿರುದ್ಧ ನಡೆಸಿದ ಕಾರ್ಯಾಚರಣೆಗೆ ಸಿಕ್ಕ ಯಶಸ್ಸು ಪಶ್ಚಿಮ ಏಷ್ಯಾದಲ್ಲಿ ಹೊಸ ಶಕೆ ಆರಂಭಕ್ಕೆ ನಾಂದಿ ಹಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ತಹಬದಿಗೆ ಬರುತ್ತಿದೆ. ತನ್ನ ಪರಮಾಣು ಕಾರ್ಯಕ್ರಮ ಕುರಿತು ಮತ್ತೆ ಮಾತುಕತೆ ಆರಂಭಿಸಲು ಇರಾನ್ ಇಚ್ಛೆ ವ್ಯಕ್ತಪಡಿಸಿದ್ದು ಶೀಘ್ರವೇ ಆರಂಭಗೊಳ್ಳಲಿವೆಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
‘ವಾರದೊಳಗೆ ಇರಾನ್ ಜತೆ ಮಾತುಕತೆ’
‘ವಾರದೊಳಗೆ ಇರಾನ್ ಜೊತೆ ಮಾತುಕತೆ ಪುನಃ ಆರಂಭಗೊಳ್ಳುವ ನಿರೀಕ್ಷೆ ಇದೆ’ ಎಂದು ಪಶ್ಚಿಮ ಏಷ್ಯಾಕ್ಕೆ ಟ್ರಂಪ್ ಅವರ ರಾಯಭಾರಿ ಸ್ಟೀವ್ ವಿಟ್‌ಕಾಫ್ ಹೇಳಿದ್ದಾರೆ ಆದರೆ ಮಾತುಕತೆ ನಡೆಸುವಂತೆ ಅಮೆರಿಕವನ್ನು ಕೋರಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.