ADVERTISEMENT

ಉತ್ತರ ಕೊರಿಯಾದಲ್ಲಿ ಕೋವಿಡ್–19 ಉಲ್ಬಣ: ಕಿಮ್ ಜಾಂಗ್ ಉನ್‌ಗೆ ಇಕ್ಕಟ್ಟು

ಏಜೆನ್ಸೀಸ್
Published 17 ಮೇ 2022, 10:48 IST
Last Updated 17 ಮೇ 2022, 10:48 IST
ಕಿಮ್ ಜಾಂಗ್ ಉನ್‌
ಕಿಮ್ ಜಾಂಗ್ ಉನ್‌   

ಸೋಲ್: ಉತ್ತರ ಕೊರಿಯಾದಲ್ಲಿ ಸದ್ಯ ಕೋವಿಡ್–19 ಪರಿಸ್ಥಿತಿ ಉಲ್ಬಣಗೊಂಡಿರುವುದು ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಅಂತರರಾಷ್ಟ್ರೀಯ ನೆರವು ಪಡೆಯಲು ಹಿಂದೇಟು ಹಾಕುವ ಅವರು ದಶಕಗಳಿಂದ ಸ್ವಾವಲಂಬನೆಯ ಆಡಳಿತ ನಡೆಸುತ್ತಿದ್ದಾರೆ. ಆದರೆ ಕೋವಿಡ್ ಪಿಡುಗು ಅವರನ್ನು ಪೇಚಿಗೆ ಸಿಲುಕಿಸಿದೆ ಎಂದು ಮೂಲಗಳು ಹೇಳಿವೆ.

ಉತ್ತರ ಕೊರಿಯಾದಲ್ಲಿ ಸಾವಿರಾರು ಮಂದಿಗೆ ಕೋವಿಡ್ ತಗುಲಿರುವ ಶಂಕೆ ವ್ಯಕ್ತವಾಗಿದೆ. ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪ್ರತಿಷ್ಠೆ ಬಿಟ್ಟು ಅಂತರರಾಷ್ಟ್ರೀಯ ಸಮುದಾಯದ ನೆರವು ಪಡೆಯಬೇಕೇ ಅಥವಾ ಏಕಾಂಗಿಯಾಗಿಯೇ ವೈರಸ್ ನಿರ್ಮೂಲನೆಗೆ ಶ್ರಮಿಸಬೇಕೇ ಎಂಬ ದ್ವಂದ್ವ ಕಿಮ್ ಜಾಂಗ್ ಉನ್‌ಗೆ ಎದುರಾಗಿದೆ.

‘ಕಿಮ್ ಜಾಂಗ್ ಉನ್ ದ್ವಂದ್ವದಲ್ಲಿದ್ದಾರೆ’ ಎಂದು ಸೋಲ್‌ನಲ್ಲಿರುವ ಕ್ಯುಂಗ್ನಮ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲಿಮ್ ಯುಲ್-ಚುಲ್ ಹೇಳಿದ್ದಾರೆ.

‘ಕಿಮ್ ಅವರು ಪಾಶ್ಚಾತ್ಯ ದೇಶಗಳ ಅಥವಾ ಅಮೆರಿಕದ ನೆರವು ಪಡೆದಿದ್ದೇ ಆದಲ್ಲಿ ಅವರ ಪ್ರತಿಷ್ಠೆಗೆ, ಸ್ವಾವಲಂಬನೆಗೆ ಹೊಡೆತ ಬೀಳಲಿದೆ. ಅಲ್ಲದೆ, ಕಿಮ್ ಮೇಲಿನ ಸಾರ್ವಜನಿಕ ವಿಶ್ವಾಸವೂ ದುರ್ಬಲಗೊಳ್ಳಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಕೊರಿಯಾದಲ್ಲಿ ಕಳೆದ ವಾರ ಮೊದಲ ಕೋವಿಡ್ ಪ್ರಕರಣ ದೃಢಪಟ್ಟಿತ್ತು. ಆ ಬಳಿಕ ದೇಶದಲ್ಲಿ ವ್ಯಾಪಕವಾಗಿ ಜ್ವರ ಹರಡುತ್ತಿದೆ ಎಂದು ಅಲ್ಲಿನ ಆಡಳಿತ ಹೇಳಿಕೊಂಡಿತ್ತು. ಸದ್ಯ ಸುಮಾರು 15 ಲಕ್ಷ ಜನ ಜ್ವರದಿಂದ ಬಳಲುತ್ತಿದ್ದು, ಈವರೆಗೆ 56 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇವೆಲ್ಲ ಕೋವಿಡ್ ಪ್ರಕರಣಗಳೇ ಇರಬಹುದು ಎಂದು ವಿದೇಶಗಳ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದರು.

ಕೊರೊನಾವೈರಸ್ ಹರಡುವಿಕೆಯಿಂದ ದೇಶವು 'ಕ್ಷೋಭೆ' ಎದುರಿಸುತ್ತಿದೆ ಎಂದು ಕಿಮ್‌ ಜಾಂಗ್‌ ಉನ್‌ ಕೆಲ ದಿನಗಳ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.