ADVERTISEMENT

ಗ್ರೀನ್‌ಲ್ಯಾಂಡ್ ಸ್ವಾಧೀನಕ್ಕೆ ಟ್ರಂಪ್ ಪಟ್ಟು: ನಮಗೆ ಸಂಬಂಧಿಸಿದ್ದಲ್ಲ ಎಂದ ರಷ್ಯಾ

ಏಜೆನ್ಸೀಸ್
Published 22 ಜನವರಿ 2026, 3:08 IST
Last Updated 22 ಜನವರಿ 2026, 3:08 IST
<div class="paragraphs"><p>ವ್ಲಾಡಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್</p></div>

ವ್ಲಾಡಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್

   

ಮಾಸ್ಕೊ: ‘ಗ್ರೀನ್‌ಲ್ಯಾಂಡ್‌ನಲ್ಲಿ ಏನಾಗುತ್ತಿದೆಯೋ ಅದು ನಮಗೆ ಸಂಬಂಧಿಸಿದ್ದಲ್ಲ’ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಹೇಳಿದ್ದಾರೆ ಎಂದು ರಷ್ಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಪುಟಿನ್, ‘ಗ್ರೀನ್‌ಲ್ಯಾಂಡ್‌ ವಿಚಾರದಲ್ಲಿ ರಷ್ಯಾ ತಲೆಹಾಕುವುದಿಲ್ಲ. ಈ ವಿಷಯವನ್ನು ಅಮೆರಿಕ ಮತ್ತು ನ್ಯಾಟೋ ಸದಸ್ಯ ರಾಷ್ಟ್ರಗಳು ತಮ್ಮೊಳಗೆ ಬಗೆಹರಿಸಿಕೊಳ್ಳಲಿವೆ’ ಎಂದು ಹೇಳಿದ್ದಾರೆ.

ADVERTISEMENT

ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ರಷ್ಯಾ ಯತ್ನಿಸುತ್ತಿದೆ ಎಂಬ ಟ್ರಂಪ್ ಹೇಳಿಕೆಯನ್ನು ಅಲ್ಲಗೆಳೆದಿರುವ ಅವರು, ಗ್ರೀನ್‌ಲ್ಯಾಂಡ್‌ ಅನ್ನು ಅಮೆರಿಕದ ವ್ಯಾಪ್ತಿಗೆ ತರುವ ಟ್ರಂಪ್‌ ಪ್ರಯತ್ನವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

ಮುಂದುವರಿದು, ‘ಮೊದಲಿನಿಂದಲೂ ಡೆನ್ಮಾರ್ಕ್ ‘ಗ್ರೀನ್‌ಲ್ಯಾಂಡ್’ ಅನ್ನು ವಸಾಹತು ಎಂದು ಪರಿಗಣಿಸಿದೆ ಮತ್ತು ಅದರ ಬಗ್ಗೆ ಕ್ರೂರವಲ್ಲದಿದ್ದರೂ ಕಠಿಣವಾಗಿ ವರ್ತಿಸಿದೆ. ಆದರೆ, ಅದು ಸಂಪೂರ್ಣವಾಗಿ ಬೇರೆಯದೇ ವಿಷಯ. ಈಗ ಯಾರಾದರೂ ಅದರಲ್ಲಿ ಆಸಕ್ತಿ ಹೊಂದಿದ್ದಾರೆಯೇ ಎಂಬ ಬಗ್ಗೆ ನನಗೆ ಸಂದೇಹವಿದೆ’ ಎಂದಿದ್ದಾರೆ.

‘ಖಂಡಿತವಾಗಿ ಇದು ನಮಗೆ ಸಂಬಂಧಿಸಿದ್ದಲ್ಲ. ಅವರು(ಅಮೆರಿಕ–ಯುರೋಪ್) ಅದನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ ಪುಟಿನ್‌, 1917 ರಲ್ಲಿ ವರ್ಜಿನ್ ದ್ವೀಪಗಳನ್ನು ಡೆನ್ಮಾರ್ಕ್ ಅಮೆರಿಕಕ್ಕೆ ಮಾರಾಟ ಮಾಡಿರುವುದನ್ನು ನೆನಪಿಸಿದ್ದಾರೆ.

ಇದೇ ವೇಳೆ, 1867 ರಲ್ಲಿ ತನ್ನ ಭೂಭಾಗವಾಗಿದ್ದ ಅಲಾಸ್ಕಾವನ್ನು ಅಮೆರಿಕಕ್ಕೆ ಮಾರಾಟ ಮಾಡಿರುವುದನ್ನು ಪ್ರಸ್ತಾಪಿಸಿದ್ದಾರೆ.

ರಷ್ಯಾಕ್ಕೆ ಒಳಗೊಳಗೆ ಖುಷಿ:

ಗ್ರೀನ್‌ಲ್ಯಾಂಡ್‌ ಸ್ವಾಧೀನಪಡಿಸಿಕೊಳ್ಳುವ ಅಮೆರಿಕದ ಪ್ರಯತ್ನಕ್ಕೆ ರಷ್ಯಾ ಬೆಂಬಲ ನೀಡುತ್ತಿರುವುದರ ಹಿಂದೆ ಅನೇಕ ಉದ್ದೇಶಗಳಿವೆ. ಸದ್ಯ ಗ್ರೀನ್‌ಲ್ಯಾಂಡ್‌ಗಿಂತ ರಷ್ಯಾಕ್ಕೆ ಉಕ್ರೇನ್‌ ವಶಪಡಿಸಿಕೊಳ್ಳುವುದು ಮುಖ್ಯವಾಗಿದೆ. ಅಮೆರಿಕ ಮತ್ತು ನ್ಯಾಟೊ ಸದಸ್ಯ ರಾಷ್ಟ್ರಗಳ ನಡುವೆ ಬಿರುಕು ಮೂಡುತ್ತಿರುವುದು ಉಕ್ರೇನ್‌ ವಶಪಡಿಸಿಕೊಳ್ಳುವ ರಷ್ಯಾದ ಯತ್ನಕ್ಕೆ ಸಹಕಾರಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.