ADVERTISEMENT

ಖಾಸಗಿ ವಿಮಾನ ನಿಲ್ದಾಣ ನಿರ್ಮಿಸುತ್ತಿಲ್ಲ, ವರದಿಗಳೆಲ್ಲ ಸುಳ್ಳು: ಇಲಾನ್‌ ಮಸ್ಕ್‌ 

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 4:03 IST
Last Updated 5 ಆಗಸ್ಟ್ 2022, 4:03 IST
ಇಲಾನ್‌ ಮಸ್ಕ್‌
ಇಲಾನ್‌ ಮಸ್ಕ್‌   

ಸ್ಯಾನ್ ಫ್ರಾನ್ಸಿಸ್ಕೋ: ಟೆಸ್ಲಾದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ವಿಶ್ವದ ಶ್ರೀಮಂತ ಉದ್ಯಮಿ ಇಲಾನ್‌ ಮಸ್ಕ್ ಟೆಕ್ಸಾಸ್‌ನ ಆಸ್ಟಿನ್‌ ಹೊರವಲಯದಲ್ಲಿ ಶೀಘ್ರದಲ್ಲೇ ಖಾಸಗಿ ವಿಮಾನ ನಿಲ್ದಾಣವೊಂದನ್ನು ನಿರ್ಮಿಸಲಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸ್ವತಃ ಮಸ್ಕ್‌ ನಿರಾಕರಿಸಿದ್ದಾರೆ. ಇವೆಲ್ಲವೂ ಸುಳ್ಳು ಸುದ್ದಿಗಳು ಎಂದು ಅವರು ಹೇಳಿದ್ದಾರೆ.

‘ಸ್ವಂತದ ವಿಮಾನ ನಿಲ್ದಾಣ ನಿರ್ಮಿಸುತ್ತಿರುವ ಸುದ್ದಿ ನಿಜವಲ್ಲ. ಆಸ್ಟಿನ್‌ನ ಅಂತರರಾಷ್ಟ್ರೀಯ ಏರ್‌ಪೋರ್ಟ್‌ನಿಂದ ಟೆಸ್ಲಾ ಕಚೇರಿಗೆ ತಲುಪಲು 5 ನಿಮಿಷಗಳಾಗುತ್ತವೆ. ಮತ್ತೊಂದು ಖಾಸಗಿ ವಿಮಾನ ನಿಲ್ದಾಣವನ್ನು ನಿರ್ಮಿಸುವುದು ಮೂರ್ಖತನದ ಸಂಗತಿ. ಆದರೆ, ಆಸ್ಟಿನ್‌ನಲ್ಲಿ ಅಸ್ತಿತ್ವದಲ್ಲಿರುವ ವಾಣಿಜ್ಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ರನ್‌ವೇ ಅಗತ್ಯವಿರುವುದಂತೂ ಸತ್ಯ. ಏಕೆಂದರೆ ಆಸ್ಟಿನ್ ವೇಗವಾಗಿ ಬೆಳೆಯುತ್ತಿದೆ’ ಎಂದು ಮಸ್ಕ್‌ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

ಆಸ್ಟಿನ್ ವಿಮಾನ ನಿಲ್ದಾಣವು 130,000 ಚದರ ಅಡಿ ವಿಶಾಲವಾದ ಪ್ರದೇಶದಲ್ಲಿದೆ. ಅದರಲ್ಲಿ 6,025 ಅಡಿ ರನ್‌ವೇ ಕೂಡ ಇದೆ.

ಮಸ್ಕ್‌ ತಮ್ಮ ವಿಮಾನ ನಿಲ್ದಾಣವನ್ನು ಆಸ್ಟಿನ್‌ನ ಪೂರ್ವ ಭಾಗದ ಬಾಸ್ಟ್ರೋಪ್ ಬಳಿ ನಿರ್ಮಿಸುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು.

ಮಸ್ಕ್ ಮತ್ತು ಅವರ ಕಂಪನಿಗಳಿಗೆ ಖಾಸಗಿ ವಿಮಾನ ನಿಲ್ದಾಣವು ಸಹಾಯಕವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಟೆಸ್ಲಾ ತನ್ನ ಜಾಗತಿಕ ಪ್ರಧಾನ ಕಚೇರಿಯನ್ನು ಆಸ್ಟಿನ್‌ಗೆ ಸ್ಥಳಾಂತರಿಸಿದೆ. ಅಲ್ಲದೆ, ಮಸ್ಕ್‌ ಒಡೆತನದ ಸುರಂಗ ನಿರ್ಮಾಣ ಸಂಸ್ಥೆ ‘ದಿ ಬೋರಿಂಗ್ ಕಂಪನಿ’ ಕೂಡ ಆಸ್ಟಿನ್‌ನಲ್ಲೇ ಇದೆ.

ಇಲಾನ್‌ ಮಸ್ಕ್‌ ಅವರು ಸಾಮಾಜಿಕ ಮಾಧ್ಯಮ ಟ್ವಿಟರ್‌ ಅನ್ನು 44 ಶತಕೋಟಿ ಡಾಲರ್‌ಗೆ (₹3.49 ಲಕ್ಷ ಕೋಟಿ) ಖರೀದಿಸುವುದಾಗಿ ಕಳೆದ ಏಪ್ರಿಲ್‌ನಲ್ಲಿ ಘೋಷಿಸಿದ್ದರು. ಟ್ವಿಟರ್‌ನ ಪ್ರತಿ ಷೇರನ್ನು 54.20 ಡಾಲರ್‌ಗಳಿಗೆ (₹4,299) ಖರೀದಿಸುವುದಾಗಿ ಮಸ್ಕ್ ಖರೀದಿ ಮಾತುಕತೆ ವೇಳೆ ಹೇಳಿದ್ದರು.

ನಂತರದಲ್ಲಿ ಖರೀದಿ ಒಪ್ಪಂದದಿಂದ ಮಸ್ಕ್‌ ಹಿಂದೆ ಸರಿದಿದ್ದರು. ‘ನಕಲಿ ಖಾತೆಗಳ ಕುರಿತ ಮಾಹಿತಿಯನ್ನು ನೀಡಲು ಟ್ವಿಟರ್‌ ವಿಫಲವಾಗಿದೆ. ಈ ಕುರಿತ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ. ಹೀಗಾಗಿ ಒಪ್ಪಂದದಿಂದ ಹಿಂದೆ ಸರಿಯುತ್ತಿದ್ದೇವೆ’ ಎಂದು ಟೆಸ್ಲಾ ಸಿಇಒ ಇಲಾನ್‌ ಮಸ್ಕ್‌ ಹೇಳಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.