ಪಾಕಿಸ್ತಾನ, ಭಾರತ
(ಐಸ್ಟೋಕ್ ಚಿತ್ರ)
ನ್ಯೂಯಾರ್ಕ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ ಹೆಚ್ಚುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಸಂಬಂಧ ಪಾಕಿಸ್ತಾನದ ಮೇಲೆ ಛೀಮಾರಿ ಹಾಕಿವೆ.
15 ರಾಷ್ಟ್ರಗಳನ್ನು ಒಳಗೊಂಡ ಭದ್ರತಾ ಮಂಡಳಿಯ ಸಭೆ ರಹಸ್ಯ ಕೊಠಡಿಯಲ್ಲಿ ನಡೆಯಿತು. ಆದರೆ ಈ ಸಂಬಂಧ ಪ್ರಕಟಣೆ ಹೊರಡಿಸಲಿಲ್ಲ. ಸದಸ್ಯ ರಾಷ್ಟ್ರಗಳು ಪಾಕಿಸ್ತಾನದ ವಿರುದ್ಧ ಕಠಿಣ ಪ್ರಶ್ನೆಗಳನ್ನು ಎತ್ತಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿವೆ. ದಾಳಿಕೋರರನ್ನು ಶಿಕ್ಷೆಗೆ ಗುರಿಪಡಿಸುವಂತೆ ಒಮ್ಮತದ ಅಭಿಪ್ರಾಯ ಮೂಡಿಬಂದಿದೆ.
ಸಭೆಯಲ್ಲಿ ಪಾಕಿಸ್ತಾನ ತನಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ವಿಫಲವಾಗಿದೆ. ಭದ್ರತಾ ಮಂಡಳಿಯ ಸದಸ್ಯರು ಅನೌಪಚಾರಿಕ ಅಧಿವೇಶನದಲ್ಲಿ ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆಗಳನ್ನು ಎತ್ತಿದ್ದಾರೆ.
ಭಾರತದೊಂದಿಗಿನ ದ್ವಿಪಕ್ಷೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆಯೂ ಸಲಹೆ ನೀಡಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಉದ್ವಿಗ್ನ ಶಮನಕ್ಕೆ ಯತ್ನಿಸಬೇಕು ಎಂದು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಲಹೆ ನೀಡಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ಕೃತ್ಯದ ಹಿಂದಿನ ದಾಳಿಕೋರರನ್ನು ಹಾಗೂ ಬೆಂಬಲಿಸಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಭಾರತ ಹೇಳಿದೆ.
ದಾಳಿ ಬೆನ್ನಲ್ಲೇ ಪಾಕಿಸ್ತಾನ ಜೊತೆಗಿನ ಎಲ್ಲ ರಾಜತಾಂತ್ರಿಕ ಬಾಂಧವ್ಯವನ್ನು ಭಾರತ ಕಡಿದುಕೊಂಡಿತ್ತು. ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.