ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ವ್ಯಾಪಾರ ವಿಷಯವನ್ನು ಪ್ರಸ್ತಾಪಿಸಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷವನ್ನು ಶಮನಗೊಳಿಸಲಾಯಿತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, 'ನಾವು ಹಲವು ಯುದ್ಧಗಳನ್ನು ನಿಲ್ಲಿಸಿದ್ದೇವೆ. ಅದರಲ್ಲಿ ಭಾರತ ಹಾಗಾ ಪಾಕಿಸ್ತಾನ ನಡುವಣ ಬಹಳ ದೊಡ್ಡ ಯುದ್ಧವನ್ನು ಶಮನಗೊಳಿಸಿದ್ದೇವೆ. ವ್ಯಾಪಾರದ ವಿಷಯವನ್ನು ಪ್ರಸ್ತಾಪಿಸಿ ನಾವು ಅದನ್ನು ನಿಲ್ಲಿಸಿದ್ದೇವೆ' ಎಂದು ಹೇಳಿದ್ದಾರೆ.
'ನಾವು ಭಾರತ ಹಾಗೂ ಪಾಕಿಸ್ತಾನದೊಂದಿಗೆ ಉತ್ತಮವಾಗಿ ವ್ಯವಹರಿಸುತ್ತಿದ್ದೇವೆ. ನೀವು ಯುದ್ಧ ಮುಂದುವರಿಸಿದರೆ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದೆವು. ಬಹುಶಃ ಅವರು ನ್ಯೂಕ್ಲಿಯರ್ ಹಂತಕ್ಕೆ ಹೋಗಿದ್ದರು. ಈ ಯುದ್ಧವನ್ನು ನಿಲ್ಲಿಸುವುದು ಬಹಳ ಮುಖ್ಯವೆನಿಸಿತ್ತು' ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ.
ತಾನೇ ಮಧ್ಯಸ್ಥಿಕೆ ವಹಿಸುವ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಿದ್ದಾಗಿ ಟ್ರಂಪ್ ಹಲವು ಬಾರಿ ಹೇಳುತ್ತಲೇ ಬಂದಿದ್ದರು. ಬಳಿಕ ಒಂದು ಬಾರಿ ಭಾರತ ಹಾಗೂ ಪಾಕ್ ನಾಯಕರೇ ಸಂಘರ್ಷ ನಿಲ್ಲಿಸಿದ್ದಾಗಿಯೂ ಹೇಳಿದ್ದರು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ನಡೆಸಿತ್ತು. ಇದರ ಬಳಿಕ ಉಭಯ ರಾಷ್ಟ್ರಗಳ ಮಧ್ಯೆ ಮಿಲಿಟರಿ ಸಂಘರ್ಷ ಏರ್ಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.