ADVERTISEMENT

SCO: ಪಾಕ್ ಪ್ರಧಾನಿ ಎದುರಲ್ಲೇ ಭಯೋತ್ಪಾದನೆ, ಪಹಲ್ಗಾಮ್ ವಿಷಯ ಪ್ರಸ್ತಾಪಿಸಿದ ಮೋದಿ

ಪಿಟಿಐ
Published 1 ಸೆಪ್ಟೆಂಬರ್ 2025, 6:09 IST
Last Updated 1 ಸೆಪ್ಟೆಂಬರ್ 2025, 6:09 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

(ಪಿಟಿಐ ಚಿತ್ರ)

ತಿಯಾನ್‌ಜಿನ್‌: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯ ವೇಳೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರ ಎದುರಲ್ಲೇ ಭಯೋತ್ಪಾದನೆ ಹಾಗೂ ಪಹಲ್ಗಾಮ್ ದಾಳಿ ವಿಚಾರಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.

ADVERTISEMENT

ತಿಯಾನ್‌ಜಿನ್‌‌ನಲ್ಲಿ ನಡೆಯುತ್ತಿರುವ ಎಸ್‌ಸಿಒ ವಾರ್ಷಿಕ ಶೃಂಗದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಪಹಲ್ಗಾಮ್‌ನಲ್ಲಿ ನಡೆದ ದಾಳಿ ಕೇವಲ ಭಾರತದ ಮೇಲಿನ ದಾಳಿಯಲ್ಲ, ಮಾನವೀಯತೆಯ ಮೇಲೆ ನಂಬಿಕೆಯನ್ನಿಡುವ ದೇಶಗಳಿಗೂ ಬಹಿರಂಗ ಸವಾಲಾಗಿತ್ತು' ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ 'ಭಯೋತ್ಪಾದನೆ ವಿರುದ್ಧ ದ್ವಂದ ನೀತಿ, ನಿಲುವುಗಳನ್ನು ಎಲ್ಲರೂ ಒಮ್ಮತದಿಂದ ತಿರಸ್ಕರಿಸಬೇಕು. ಇದು ಮಾನವೀಯತೆಯತ್ತ ನಮ್ಮ ಕರ್ತವ್ಯವಾಗಿದೆ' ಎಂದು ಹೇಳಿದ್ದಾರೆ.

'ಕೆಲವು ದೇಶಗಳು ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲಿಸುವುದನ್ನು ಒಪ್ಪಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ' ಎಂದು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸಿದೆಯೇ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.

'ಭಾರತ ಕಳೆದ ನಾಲ್ಕು ದಶಕಗಳಿಂದ ಭಯೋತ್ಪಾದನೆಯ ನೋವನ್ನು ಅನುಭವಿಸುತ್ತಿದೆ. ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅನೇಕ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.

ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ

'ಭಯೋತ್ಪಾದನೆ ಎದುರಿಸುವಲ್ಲಿ ದ್ವಂದ ನೀತಿ ಇರಬಾರದು. ನಾವೆಲ್ಲರೂ ಸ್ಪಷ್ಟ ಹಾಗೂ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಎಲ್ಲ ರೀತಿಯ ಭಯೋತ್ಪಾದನೆಯನ್ನು ವಿರೋಧಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಭಾರತದೊಂದಿಗೆ ನಿಂತ ಮಿತ್ರ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 'ಯಾವುದೇ ರಾಷ್ಟ್ರದ ಶಾಂತಿ, ಸಮೃದ್ಧಿ, ಸ್ಥಿರತೆಗೆ ಭಯೋತ್ಪಾದನೆ, ಪತ್ಯೇಕತಾವಾದ ಹಾಗೂ ಉಗ್ರವಾದ ಸವಾಲಾಗಿವೆ' ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.