ADVERTISEMENT

Pahalgam Attack | ತಟಸ್ಥ ತನಿಖೆಗೆ ಸಿದ್ಧ: ಪಾಕ್ ಪ್ರಧಾನಿ ಶೆಹಬಾಜ್‌ ಶರೀಫ್

ಏಜೆನ್ಸೀಸ್
Published 26 ಏಪ್ರಿಲ್ 2025, 9:02 IST
Last Updated 26 ಏಪ್ರಿಲ್ 2025, 9:02 IST
ಶೆಹಬಾಜ್‌ ಷರೀಫ್‌ 
ಶೆಹಬಾಜ್‌ ಷರೀಫ್‌    

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿದ ದಾಳಿ ಪ್ರಕರಣದಲ್ಲಿ ತಟಸ್ಥ ತನಿಖೆಗೆ ಪಾಕಿಸ್ತಾನ ಸಿದ್ಧವಿದೆ ಎಂದು ಪ್ರಧಾನಿ ಶಹಬಾಜ್ ಶರೀಫ್‌ ಹೇಳಿದ್ದಾರೆ.

ಪಹಲ್ಗಾಮ್ ದಾಳಿಯಲ್ಲಿ ಇಬ್ಬರು ವಿದೇಶಿಯರು, ಮೂವರು ಕರ್ನಾಟಕದವರು ಸೇರಿ ಒಟ್ಟು 26 ಜನ ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಕಣಿವೆ ನಾಡಿನಲ್ಲಿ ನಡೆದ ಬೀಕರ ಕೃತ್ಯ ಇದಾಗಿದೆ. ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನು ಭಾರತ ಕಡಿದುಕೊಂಡಿದೆ. ಸಿಂಧೂ ಜಲ ಒಪ್ಪಂದ ಅಮಾನತು, ವಿಸಾ ಹಿಂಪಡೆತ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿತ್ತು.

ಖೈಬರ್ ಪ‍ಖ್ತುಂಖ್ವಾದಲ್ಲಿರುವ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಶರೀಫ್, ‘ಪಾಕಿಸ್ತಾನವು ವಿಶ್ವಾಸಾರ್ಹ ತನಿಖೆಯಲ್ಲಿ ಪಾಲ್ಗೊಳ್ಳಲು ಮುಕ್ತವಾಗಿದೆ’ ಎಂದಿದ್ದಾರೆ.

ADVERTISEMENT

'ಪಾಕಿಸ್ತಾನ ವಿರುದ್ಧದ ಆಧಾರ ರಹಿತ ಆರೋಪದಾಟಕ್ಕೆ ಪಹಲ್ಗಾಮ್ ಮತ್ತೊಂದು ಘಟನೆಯಾಗಿದೆ. ಇದು ತಾರ್ತಿಕ ಅಂತ್ಯ ಕಾಣಬೇಕು. ಭಯೋತ್ಪಾದನೆಯನ್ನು ಪಾಕಿಸ್ತಾನ ಸದಾ ಖಂಡಿಸುತ್ತಲೇ ಬಂದಿದೆ. ಒಂದು ಜವಾಬ್ದಾರಿಯುತ ರಾಷ್ಟ್ರವಾಗಿ ಯಾವುದೇ ತಟಸ್ಥ, ವಸ್ತುನಿಷ್ಠ ಮತ್ತು ಪಾರದರ್ಶಕ ತನಿಖೆಯಲ್ಲಿ ಪಾಲ್ಗೊಳ್ಳಲು ಸಿದ್ಧ’ ಎಂದು ಶರೀಫ್ ಹೇಳಿದ್ದಾರೆ.

ಅಮೆರಿಕ ಹೇಳಿದಂತೆ ಭಯೋತ್ಪಾದನೆಗೆ ಬೆಂಬಲ ನೀಡುವ ಕೊಳಕು ಸೇವೆ ಮಾಡಿದ ಪರಿಣಾಮಕ್ಕೆ ಈಗ ಪರಿತಪಿಸುವಂತಾಗಿದೆ ಎಂದಿದ್ದ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಉಗ್ರರ ಪೋಷಣೆ ಒಪ್ಪಿಕೊಂಡಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಶಹಬಾಜ್ ಶರೀಫ್‌ ಈ ಹೇಳಿಕೆ ನೀಡಿದ್ದಾರೆ.

ಪಹಲ್ಗಾಮ್‌ ದಾಳಿಯನ್ನು ದಿ ರೆಸಿಸ್ಟನ್ಸ್‌ ಫ್ರಂಟ್‌ ಎಂಬ ಲಷ್ಕರ್ ಎ ತಯಬಾ ಸಂಘಟನೆಯ ಅಂಗ ಸಂಸ್ಥೆ ನಡೆಸಿರುವುದಾಗಿ ಒಪ್ಪಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.