ಪಾಕಿಸ್ತಾನ ಧ್ವಜ
ಇಸ್ಲಾಮಾಬಾದ್: ರಕ್ಷಣಾ ಉದ್ದೇಶಗಳಿಗಾಗಿ ಮಾಡುವ ವೆಚ್ಚವನ್ನು ಮುಂದಿನ ಬಜೆಟ್‌ನಲ್ಲಿ ಶೇ 18ರಷ್ಟು ಹೆಚ್ಚಿಸಲು ಪಾಕಿಸ್ತಾನದ ಮೈತ್ರಿಕೂಟ ಸರ್ಕಾರ ಒಪ್ಪಿದೆ ಎಂದು ಮಂಗಳವಾರ ಮಾಧ್ಯಮ ವರದಿಯೊಂದು ಹೇಳಿದೆ.
ಮುಂದಿನ ತಿಂಗಳ ಮೊದಲ ವಾರದಲ್ಲಿ ಪಾಕಿಸ್ತಾನ ಸರ್ಕಾರವು 2025–26ರ ಬಜೆಟ್ ಮಂಡಿಸಲಿದೆ. ಪಾಕಿಸ್ತಾನದಲ್ಲಿ ಜುಲೈ 1ರಿಂದ ಹೊಸ ಆರ್ಥಿಕ ವರ್ಷ ಶುರುವಾಗುತ್ತದೆ.
ಬಜೆಟ್ ಕುರಿತು ಚರ್ಚಿಸಲು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ನಿಯೋಗ ಬಿಲಾವಲ್ ಭುಟ್ಟೊ ಝರ್ದಾರಿ ನೇತೃತ್ವದಲ್ಲಿ ಪ್ರಧಾನಿ ಶೆಹಬಾಜ್ ಶರೀಫ್ ಅವರನ್ನು ಸೋಮವಾರ ಭೇಟಿ ಮಾಡಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್ ನೇತೃತ್ವದ ಸರ್ಕಾರವು ಅಂದಾಜು ₹17.5 ಲಕ್ಷ ಕೋಟಿ (ಪಾಕಿಸ್ತಾನ ರೂಪಾಯಿ) ಕೋಟಿ ಮೊತ್ತದ ಬಜೆಟ್ ಬಗ್ಗೆ ಪಿಪಿಪಿ ನಿಯೋಗಕ್ಕೆ ಮಾಹಿತಿ ನೀಡಿದೆ. ಬಜೆಟ್‌ನಲ್ಲಿ ರಕ್ಷಣಾ ಉದ್ದೇಶಕ್ಕಾಗಿ ಮೀಸಲಿರುವ ಮೊತ್ತವನ್ನು ಶೇ 18ರಷ್ಟು (₹2.5 ಲಕ್ಷ ಕೋಟಿಗಿಂತ ಹೆಚ್ಚು) ಜಾಸ್ತಿ ಮಾಡುವ ಪ್ರಸ್ತಾವಕ್ಕೆ ಪಿಪಿಪಿ ಒಪ್ಪಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.