
ಆಫ್ಗಾನಿಸ್ತಾನದ ಮೇಲೆ ಪಾಕ್ ಸೇನೆಯ ವೈಮಾನಿಕ ದಾಳಿಯ ದೃಶ್ಯ
ಎಕ್ಸ್ ಚಿತ್ರ
ಕಾಬೂಲ್: ಗಡಿಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಉದ್ವಿಗ್ನತೆ ಈಗ ಯುದ್ಧದ ಸ್ವರೂಪ ಪಡೆದುಕೊಂಡಿದೆ. ತಾಲಿಬಾನ್ ಆಡಳಿತವಿರುವ ಆಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ಯುದ್ಧ ಸಾರಿದೆ. ‘ಆಪರೇಷನ್ ಗಜಬ್ ಲಿಲ್ ಹಕ್’ ಎಂಬ ಹೆಸರಿನ ಈ ಸೇನಾ ಕಾರ್ಯಾಚರಣೆಯಲ್ಲಿ ಈವರೆಗೂ ನೂರಕ್ಕೂ ಹೆಚ್ಚು ಜನ ಮೃತಪಟ್ಟಿರುವುದು ವರದಿಯಾಗಿದೆ.
ಯುದ್ಧ ಸಾರಿರುವ ಪಾಕಿಸ್ತಾನವು ಕಾಬೂಲ್ ಮತ್ತು ಕಂದಹಾರ್ ಅನ್ನೇ ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದೆ. ನಿರಂತರ ಪ್ರಚೋದಿತ ದಾಳಿಗೆ ಪ್ರತಿಯಾಗಿ ಈ ಯುದ್ಧ ಆರಂಭಿಸಲಾಗಿದೆ. ಗುರುವಾರ ಮತ್ತು ಶುಕ್ರವಾರ ನಡೆದ ಯುದ್ಧದಲ್ಲಿ 133 ತಾಲಿಬಾನ್ ಯೋಧರು ಮೃತಪಟ್ಟಿರುವುದಾಗಿ ಎಂದು ಪಾಕಿಸ್ತಾನ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನದ ಈ ದಾಳಿ ‘ಹೇಡಿತನದ ಕೃತ್ಯ’ ಎಂದು ತಾಲಿಬಾನ್ ಆಡಳಿತ ಹೇಳಿದ್ದು, ತನ್ನ ಕಡೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಪ್ರತಿಕ್ರಿಯಿಸಿದೆ.
ಪಾಕಿಸ್ತಾನ ಮತ್ತು ಆಫ್ಗಾನಿಸ್ತಾನದ ವಿವಾದಿತ ಗಡಿರೇಖೆಯಾದ ಡುರಾಂಡ್ ರೇಖೆಯ ಬಳಿ ಪಾಕಿಸ್ತಾನದ ಸೇನೆಯನ್ನು ಗುರಿಯಾಗಿಸಿ ತಾಲಿಬಾನ್ ಯೋಧರು ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ಸೇನೆಯು ‘ಆಪರೇಷನ್ ಗಜಬ್ ಲಿಲ್ ಹಕ್’ ಆರಂಭಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್, ‘ಪಾಕಿಸ್ತಾನವು ಸರ್ವಸನ್ನದ್ಧವಾಗಿದ್ದು, ಎಂಥದ್ದೇ ದಾಳಿಯನ್ನು ದೂಳಿಪಟ ಮಾಡಲು ಸಮರ್ಥವಾಗಿದೆ’ ಎಂದಿದ್ದಾರೆ.
ನಿರಂತರವಾಗಿ ನಡೆಯುತ್ತಿರುವ ಪಾಕ್ – ಆಫ್ಗಾನಿಸ್ತಾನ ಸಂಘರ್ಷವನ್ನು ಅಂತ್ಯಗೊಳಿಸಲು ಕೆಲ ತಿಂಗಳ ಹಿಂದೆ ಸೌದಿ ಅರೇಬಿಯಾ ಮಧ್ಯಪ್ರವೇಶಿಸಿತ್ತು. ಇದಾದ ನಂತರ ಅಕ್ಟೋಬರ್‌ನಲ್ಲಿ ಮೂವರು ಪಾಕಿಸ್ತಾನಿ ಸೈನಿಕರನ್ನು ತಾಲಿಬಾನ್ ಬಿಡುಗಡೆ ಮಾಡಿತ್ತು. ನಂತರವೂ ಗಡಿಯಲ್ಲಿ ಆಗಾಗ ಚಕಮಕಿ ನಡೆಯುತ್ತಿರುವುದು ವರದಿಯಾಗುತ್ತಲೇ ಇದೆ.
ಪಾಕಿಸ್ತಾನದ ವಾಯುಸೇನೆಯು ಯುದ್ಧ ವಿಮಾನಗಳು ಕಾಬೂಲ್, ಕಂದಹಾರ್ ಮತ್ತು ಪಕ್ಟಿಯಾ ಪ್ರಾಂತ್ಯದಲ್ಲಿರುವ ತಾಲಿಬಾನ್ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ
ಈವರೆಗೂ 130ಕ್ಕೂ ಹೆಚ್ಚು ತಾಲಿಬಾನ್ ಯೋಧರನ್ನು ಹತ್ಯೆಗೈದಿರುವುದಾಗಿ, ತಾಲಿಬಾನ್ ಶಸ್ತ್ರಾಗಾರಗಳ ನಾಶ ಮತ್ತು ಗಡಿಯಲ್ಲಿ ಹಲವರನ್ನು ಸೆರೆ ಹಿಡಿದಿರುವುದಾಗಿ ಪಾಕ್ ಘೋಷಣೆ
ಕಾಬೂಲ್, ಕಂದಹಾರ್‌ಗಳಲ್ಲಿ ಹಲವು ಬಾರಿ ಪ್ರಬಲ ಸ್ಫೋಟದ ಶಬ್ದ ಹಾಗೂ ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ಗುಂಡಿನ ಮೊರೆತ ಕೇಳಿಬಂತು ಎಂದು ಸ್ಥಳೀಯರು ಹೇಳಿರುವುದು ವರದಿಯಾಗಿದೆ.
ಆಫ್ಗಾನಿಸ್ತಾನದ ಪರಮೋಚ್ಛ ನಾಯಕ ಹಿಬತುಲ್ಲಾ ಅಖುಂದ್‌ಝಾದಾ ಅವರು ದೇಶದ ದಕ್ಷಿಣದ ಭಾಗದಲ್ಲಿ ನೆಲೆಸಿದ್ದು, ಅಲ್ಲಿಯೇ ಹೆಚ್ಚಿನ ದಾಳಿ ನಡೆದಿದೆ. ಆದರೆ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಗುರುವಾರ ತಡರಾತ್ರಿ ಪಾಕಿಸ್ತಾನಿ ಸೇನೆಯು ವಾಯುದಾಳಿ ನಡೆಸಿರುವುದನ್ನು ತಾಲಿಬಾನ್ ಖಚಿತಪಡಿಸಿದೆ. ಆದರೆ ತನ್ನಿಂದ ಆಗಿರುವ ಅಪ್ರಚೋದಿತ ದಾಳಿಗೆ ಪ್ರತಿಯಾಗಿ ನಡೆದಿರುವ ಯುದ್ಧ ಎಂಬ ಆರೋಪವನ್ನು ತಾಲಿಬಾನ್ ತಳ್ಳಿಹಾಕಿದೆ.
ಪಾಕ್ ಸೇನೆಯಿಂದ ನಿರಂತರ ಗಡಿ ಉಲ್ಲಂಘನೆಗೆ ಸಂಬಂಧಿಸಿದಂತೆ ಸೇನಾ ಕಾರ್ಯಾಚರಣೆ ನಡೆಸುವ ಕುರಿತು ಮುಜಾಹಿದ್ ಆದೇಶ ನೀಡಿದ್ದರು. ಇದು ‘ಆಪರೇಷನ್ ಗಜಬ್ ಲಿಲ್ ಹಕ್’ಗೂ ಕೆಲ ಗಂಟೆಗಳ ಮೊದಲು ನಡೆದಿತ್ತು.
ಸೇನಾ ನೆಲೆಗಳನ್ನೂ ಒಳಗೊಂಡು ಆಫ್ಗಾನಿಸ್ತಾನದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ ಮತ್ತು ಸಾವು ನೋವು ಸಂಭವಿಸಿದೆ ಎಂದು ಪಾಕಿಸ್ತಾನ ವರದಿ ಮಾಡಿದೆ.
ತೊರ್ಖಾಮ್ ಬಳಿ ನಾಗರಿಕರು ಗಾಯಗೊಂಡಿದ್ದಾರೆ. ಇವರು ಪಾಕಿಸ್ತಾನದಿಂದ ಮರಳುತ್ತಿದ್ದರು ಹಾಗೂ ಇಲ್ಲಿನ ಶಿಬಿರದಲ್ಲಿ ಆಶ್ರಯ ಪಡೆದಿದ್ದರು. ಮಹಿಳೆ ಸೇರಿದಂತೆ ಎಂಟು ನಿರಾಶ್ರಿತರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಹೇಳಿದೆ.
ಪ್ರತಿ ದಾಳಿಯಲ್ಲಿ ಪಾಕ್‌ನ ಕೆಲ ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ಆಫ್ಗಾನಿಸ್ತಾನ ಹೇಳಿಕೊಂಡಿದ್ದರೂ, ಪ್ರದೇಶಕ್ಕೆ ಪ್ರವೇಶ ನಿರ್ಬಂಧ ಇರುವುದರಿಂದ ಖಚಿತಗೊಂಡಿಲ್ಲ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ
ಪಾಕಿಸ್ತಾನ ಮತ್ತು ಆಪ್ಗಾನಿಸ್ತಾನದ ಗಡಿಯಲ್ಲಿ ನಡೆಯುತ್ತಿರುವ ದೀರ್ಘಕಾಲದ ಸೇನಾ ಸಂಘರ್ಷದಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದೆ ಮತ್ತು ಭದ್ರತೆಯ ಅಪಾಯ ತಲೆದೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.