ADVERTISEMENT

ಪಾಕಿಸ್ತಾನ: ಅಸಹಕಾರ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ಪಿಟಿಐ
Published 7 ಡಿಸೆಂಬರ್ 2024, 4:12 IST
Last Updated 7 ಡಿಸೆಂಬರ್ 2024, 4:12 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್‌: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (72) ಅವರು, ಪಾಕಿಸ್ತಾನದಾದ್ಯಂತ ನಾಗರಿಕ ಅಸಹಕಾರ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನ ತೆಹ್ರೀಕ್‌ ಇ–ಇನ್ಸಾಫ್‌ (ಪಿಟಿಐ) ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್‌, ಈ ಸಂಬಂಧ ಎಕ್ಸ್‌/ಟ್ವಿಟರ್‌ನಲ್ಲಿ ಶುಕ್ರವಾರ ಪೋಸ್ಟ್‌ ಹಂಚಿಕೊಂಡಿದ್ದಾರೆ. ರಾಜಕೀಯ ಕೈದಿಗಳ ಬಿಡುಗಡೆ, ಮೇ 9ರಂದು ನಡೆದ ಹಿಂಸಾಚಾರ ಮತ್ತು ನವೆಂಬರ್‌ 26ರಂದು ನಡೆದ ಪ್ರತಿಭಟನೆ ವೇಳೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದರ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಲು ಐವರು ಸದಸ್ಯರ ಸಮಿತಿ ರಚಿಸಿರುವುದಾಗಿ ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಉಪರ್‌ ಅಯೂಬ್‌ ಖಾನ್ ಮತ್ತು ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮಿನ್‌ ಗಂದಪುರ್‌ ಅವರೂ ಸಮಿತಿಯಲ್ಲಿದ್ದಾರೆ ಎಂದಿದ್ದಾರೆ.

ADVERTISEMENT

'ಈ ಬೇಡಿಕೆಗಳನ್ನು ಸರ್ಕಾರ ಒಪ್ಪದಿದ್ದರೆ, ಡಿಸೆಂಬರ್‌ 14ರಿಂದ ನಾಗರಿಕ ಅಸಹಕಾರ ಚಳವಳಿ ಆರಂಭಿಸಲಾಗುವುದು. ಇದಕ್ಕೆ ಸರ್ಕಾರವೇ ಹೊಣೆಯಾಗಲಿದೆ' ಎಂದು ಎಚ್ಚರಿಸಿದ್ದಾರೆ.

ಇಮ್ರಾನ್‌ ಖಾನ್‌, ತಮ್ಮ ಪಕ್ಷದ ಬಂಧಿತರನ್ನು ಬಿಡುಗಡೆ ಮಾಡಬೇಕು ಹಾಗೂ ಪಿಟಿಐ ಪಕ್ಷಕ್ಕೆ ದೊರೆತ ಚುನಾವಣಾ ಫಲಿತಾಂಶವನ್ನು ಅಂಗೀಕರಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸುವಂತೆ ನವೆಂಬರ್‌ 14ರಂದು ಕರೆ ನೀಡಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಕಚೇರಿಗಳು ಇರುವ ಇಸ್ಲಾಮಾಬಾದ್‌ನ ರೆಡ್ ಝೋನ್‌ನ ಡಿ–ಚೌಕ್‌ನಲ್ಲಿ ಪಿಟಿಐ ಕಾರ್ಯಕರ್ತರು ನವೆಂಬರ್‌ 24ರಂದು ಪ್ರತಿಭಟನೆ ಆರಂಭಿಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಬಲವಂತವಾಗಿ ಚದುರಿಸಲಾಗಿತ್ತು.

ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರತ್ತ ಗುಂಡಿನ ದಾಳಿ ಮಾಡಿದ್ದರಿಂದ 12 ಕಾರ್ಯಕರ್ತರು ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಪಿಟಿಐ ಹೇಳಿದೆ.

ಆದರೆ, ಪಿಟಿಐನ ಯಾವುದೇ ಕಾರ್ಯಕರ್ತ ಗುಂಡಿಗೆ ಬಲಿಯಾಗಿಲ್ಲ ಎಂದು ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.