ADVERTISEMENT

ಸಿರಿಯಾ ಎದುರಿಸಿದ ‘ಉಗ್ರ’ಸಂಕಷ್ಟಕ್ಕಿಂತ ಮೂರರಷ್ಟು ಅಧಿಕ ಹೊಣೆ ಪಾಕಿಸ್ತಾನ ಮೇಲಿದೆ

ಏಜೆನ್ಸೀಸ್
Published 27 ಅಕ್ಟೋಬರ್ 2018, 6:02 IST
Last Updated 27 ಅಕ್ಟೋಬರ್ 2018, 6:02 IST
   

ಲಂಡನ್‌: ಜಾಗತಿಕ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನವು ಸಿರಿಯಾ ಮನುಕುಲ ಎದುರಿಸಿದ ಭಯೋತ್ಪಾದನಾ ಸಂಕಷ್ಟಕ್ಕಿಂತ ಮೂರು ಪಟ್ಟು ಹೆಚ್ಚು ಸಂಕಷ್ಟಕ್ಕೆ ಹೊಣೆಯಾಗಿದೆ ಎಂದು ವರದಿಯೊಂದು ಉಲ್ಲೇಖಿಸಿದೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ದೂರದೃಷ್ಟಿ ಕಾರ್ಯತಂತ್ರ ಗುಂಪು, ‘ಅಪಾಯದಲ್ಲಿ ಮಾನವೀಯತೆ: ಜಾಗತಿಕ ಭಯೋತ್ಪಾದನೆ ಬೆದರಿಕೆ ಸೂಚಕಗಳು’ವಿಷಯದ ಮೇಲೆ ನಡೆದ ಅಧ್ಯಯನದ ವರದಿಯಲ್ಲಿ ಈ ರೀತಿ ಹೇಳಲಾಗಿದೆ.

ವರದಿಯ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ತಾಲಿಬಾನ್‌ ಹಾಗೂ ಲಷ್ಕರ್‌ ಇ ತಯಬಾ ಸಂಘಟನೆಗಳು ಭವಿಷ್ಯದಲ್ಲಿ ಜಾಗತಿಕ ಭದ್ರತೆಗೆ ತೊಡಕಾಗಲಿವೆ. ಅತಿಹೆಚ್ಚು ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಸುರಕ್ಷಿತ ತಾಣವಾಗಿದೆ ಎನ್ನಲಾಗಿದೆ.

ADVERTISEMENT

‘ವಾಸ್ತವ ಅಂಕಿಅಂಶಗಳನ್ನು ಗಮನದಲ್ಲಿರಿಸಿ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಸಂಘಟನೆಗಳತ್ತ ಕಣ್ಣು ಹಾಯಿಸಿದರೆ, ಪಾಕಿಸ್ತಾನ ಬೆಂಬಲಿತ ಸಂಘಟನೆಗಳೇ ಎದ್ದು ಕಾಣುತ್ತವೆ. ಅದು ಬೆಂಬಲಿಸುತ್ತಿರುವ ಸಂಘಟನೆಗಳುಗಮನಾರ್ಹ ಪ್ರಮಾಣದಲ್ಲಿ ಅಫ್ಘಾನಿಸ್ತಾದಲ್ಲಿಯೂ ಸಕ್ರಿಯವಾಗಿರುವುದು ತಿಳಿದು ಬರುತ್ತದೆ’ ಎಂದು ವರದಿಯು ಉಲ್ಲೇಖಿಸಿದೆ.

ಸುಮಾರು 80 ಪುಟಗಳಿರುವ ಈ ವರದಿಯಲ್ಲಿ ಪ್ರಸ್ತುತ, ಭವಿಷ್ಯದ ಸವಾಲುಗಳ ಕುರಿತು ಚರ್ಚಿಸಲಾಗಿದ್ದು, ಭಯೋತ್ಪಾದನೆ ನಿಗ್ರಹಕ್ಕೆ ಅಗತ್ಯ ಯೋಜನೆಗಳ ಬಗ್ಗೆ ವಿಶ್ಲೇಷಿಸಲಾಗಿದೆ.

‘ಸ್ಪರ್ಧಾತ್ಮಕ ಉಗ್ರಗಾಮಿತ್ವ, ವಿನಾಶಕಾರಕ ಶಸ್ತ್ರಾಸ್ತ್ರಗಳ ದುರ್ಬಳಕೆ, ಮಾನವ ಪ್ರಗತಿಯನ್ನು ದುರ್ಬಲಗೊಳಿಸುವ ಆರ್ಥಿಕ ಅಡೆತಡೆಗಳು ಅಥವಾ ಜೀವನಮಟ್ಟವನ್ನು ಕುಂದಿಸುವ ಪ್ರಯತ್ನಗಳುಎಲ್ಲಾ ದೃಷ್ಟಿಕೋನದಿಂದಲೂ ಹೆಚ್ಚಾಗುತ್ತಿವೆ. ಈ ಎಲ್ಲ ಬೆಳವಣಿಗೆಗಳೂ ಭಯೋತ್ಪಾದನೆಯೊಂದಿಗೆ ಸಂಬಂಧ ಹೊಂದಿವೆ’ ಎಂದು ವರದಿ ಹೇಳಿದೆ.

21ನೇ ಶತಮಾನದ ಮೊದಲ ದಶಕದ ಮೊದಲಾರ್ಧದ ಅವಧಿಯಲ್ಲಿಯೇ ಸುಮಾರು 200 ಸಂಘಟನೆಗಳು ತಮ್ಮದೇ ಆದ ಜಿಹಾದಿ ಚಿಂತನೆಯಿಂದ ಪ್ರೇರಣೆಗೊಂಡು ಪ್ರಪಂಚದಾದ್ಯಂತ ಉಗ್ರ ಕೃತ್ಯಗಳನ್ನು ಎಸಗಿವೆ ಎಂದುದೂರದೃಷ್ಟಿ ಕಾರ್ಯತಂತ್ರ ಗುಂಪು ವಿಶ್ಲೇಷಿಸಿದೆ.

ಪಾಕಿಸ್ತಾನದಲ್ಲಿ ಜಿಹಾದಿ ಗುಂಪುಗಳಿಗೆ ಸರ್ಕಾರ, ಗುಪ್ತಚರ ಇಲಾಖೆ ಅಧಿಕಾರಿಗಳೇ ಬೆಂಬಲ ನೀಡುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ಪಾಕಿಸ್ತಾನ, ಅಫ್ಘಾನಿಸ್ತಾನ, ಲಿಬಿಯಾ, ಸಿರಿಯಾ, ಯೆಮೆನ್ ಮತ್ತು ಈ ದೇಶಗಳೊಂದಿಗೆ ಪರಸ್ಪರ ಸಂಬಂಧ ಹೊಂದಿರುವ ಇತರ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಾಗತಿಕ ಭಯೋತ್ಪಾದನಾ ಸಂಘಟನೆಗಳ ಬಗ್ಗೆ ಈ ವರದಿಯು ಸಮಗ್ರ ವಿವರ ನೀಡಿದೆ.

ತಮ್ಮ ದೇಶದಲ್ಲಿ 21 ಸಂಘಟನೆಗಳಿಗೆ ಸೇರಿದ ಸುಮಾರು 50 ಸಾವಿರಕ್ಕೂ ಹೆಚ್ಚು ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಶೇ. 70 ರಷ್ಟು ಉಗ್ರರು ಪಾಕಿಸ್ತಾನ ಮೂಲದವರು ಎಂದು ಅಫ್ಘಾನಿಸ್ತಾನ ರಕ್ಷಣಾ ಸಚಿವ ಹಿಲಾವುದ್ದೀನ್‌ ಹೆಲಾಲ್‌ ಅವರು ಬೀಜಿಂಗ್‌ ಕ್ಸಿಯಾಂಗ್ಶಾನ್‌ ಫೋರಂನಲ್ಲಿ ಶುಕ್ರವಾರವಷ್ಟೇ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.