ವಾಷಿಂಗ್ಟನ್: ಪಾಕಿಸ್ತಾನದೊಂದಿಗೆ ಭಯೋತ್ಪಾದನೆ ನಿಗ್ರಹ ಕುರಿತಂತೆ ಮಾತುಕತೆ ನಡೆಸಲಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ), ಇಸ್ಲಾಮಿಕ್ ಸ್ಟೇಟ್(ಖೋರಾಸನ್), ತೆಹ್ರೀಕ್ –ಎ–ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸೇರಿದಂತೆ ವಿವಿಧ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಪ್ರತ್ಯೇಕತಾವಾದಿ ಉಗ್ರಗಾಮಿಗಳ ಗುಂಪು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಅನ್ನು ’ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
ಪಾಕಿಸ್ತಾನ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರು ಈಚೆಗೆ ಅಮೆರಿಕದ ನೆಲದಲ್ಲಿ ನಿಂತು, ಭಾರತದ ವಿರುದ್ಧ ಅಣ್ವಸ್ತ್ರ ಬಳಕೆಯ ಬೆದರಿಕೆಯೊಡಿದ್ದರು. ‘ಅಣ್ವಸ್ತ್ರ ಬ್ಲ್ಯಾಕ್‌ಮೇಲ್‌ಗೆ ಮಣಿಯುವುದಿಲ್ಲ’ ಎನ್ನುವ ಮೂಲಕ ಭಾರತ ಅದೇ ಧಾಟಿಯಲ್ಲಿ ತಿರುಗೇಟು ನೀಡಿತ್ತು.
ಫ್ಲಾರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನಿ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ್ದ ಮುನೀರ್, ಭಾರತದೊಂದಿಗಿನ ಭವಿಷ್ಯದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಸ್ತಿತ್ವದ ಆತಂಕ ಎದುರಾದರೆ ಅಣ್ವಸ್ತ್ರ ಬಳಕೆಗೆ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿತ್ತು.
‘ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳು ಅಲ್ಲಿನ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬ ಅನುಮಾನಗಳನ್ನು ಮುನೀರ್ ಹೇಳಿಕೆ ಇನ್ನಷ್ಟು ಬಲಪಡಿಸಿದೆ. ಅಲ್ಲಿನ ಸೇನೆಯು ಭಯೋತ್ಪಾದಕ ಸಂಘಟನೆಗಳ ಜತೆ ಕೈಜೋಡಿಸಿದೆ. ನೆರೆಯ ದೇಶವು ‘ಬೇಜವಾಬ್ದಾರಿತನದ ಅಣ್ವಸ್ತ್ರ ರಾಷ್ಟ್ರ’ವಾಗಿದೆ ಮತ್ತು ಶಸ್ತ್ರಾಸ್ತ್ರಗಳು ಉಗ್ರರ ಕೈಗೆ ಸೇರುವ ಅಪಾಯವಿದೆ ಎಂಬುದನ್ನು ಈ ಬೆದರಿಕೆಯು ತೋರಿಸಿದೆ’ ಎಂದು ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.