ADVERTISEMENT

ಭಯೋತ್ಪಾದನೆಯ ಡಿಎನ್‌ಎ ಪಾಕಿಸ್ತಾನ: ಭಾರತದ ಪ್ರತಿನಿಧಿ ಚಾಟಿ

ಕಾಶ್ಮೀರ ವಿಷಯ ರಾಜಕೀಯ ಬಳಕೆಗೆ ಆಕ್ಷೇಪ

ಪಿಟಿಐ
Published 15 ನವೆಂಬರ್ 2019, 20:08 IST
Last Updated 15 ನವೆಂಬರ್ 2019, 20:08 IST
ಅನನ್ಯ ಅಗರ್ವಾಲ್‌
ಅನನ್ಯ ಅಗರ್ವಾಲ್‌   

ಪ್ಯಾರಿಸ್‌: ಜಮ್ಮು ಮತ್ತು ಕಾಶ್ಮೀರ ತಮ್ಮ ಭಾಗಎಂದು ಸುಳ್ಳು ವಾದ ಹಾಗೂ ಬಾಲಿಷ ಅಪಪ್ರಚಾರ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತ ವಿಶ್ವದೆದುರು ತಕ್ಕ ಪ್ರತಿಕ್ರಿಯೆ ನೀಡಿದೆ. ದಿವಾಳಿಯಾಗಿರುವ ಈ ದುರ್ಬಲ ರಾಷ್ಟ್ರ ‘ಭಯೋತ್ಪಾದನೆಯ ಡಿಎನ್‌ಎ (ಸೃಷ್ಟಿಯ ಮೂಲ)’ ಎಂದು ಚಾಟಿ ಬೀಸಿದೆ.

‘ವಿಲಕ್ಷಣ ವರ್ತನೆಯಿಂದಾಗಿ ಈಗಾಗಲೇ ದುರ್ಬಲ ರಾಷ್ಟ್ರವಾಗಿ ಪಾಕಿಸ್ತಾನ ಗುರುತಿಸಿಕೊಂಡಿದೆ. ಇದರ ಪರಿಣಾಮವಾಗಿ ರಾಷ್ಟ್ರದಆರ್ಥಿಕತೆ ಕುಸಿದಿದ್ದು, ತೀವ್ರಗಾಮಿ ಸಮಾಜ ನಿರ್ಮಾಣವಾಗಿದೆ. ರಾಷ್ಟ್ರದಲ್ಲಿ ಭಯೋತ್ಪಾದನೆ ಆಳವಾಗಿ ಬೇರೂರಿದೆ’ ಎಂದು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಯುನೆಸ್ಕೊ ಸಮ್ಮೇಳನದಲ್ಲಿ ಭಾರತದ ನಿಯೋಗದ ನೇತೃತ್ವ ವಹಿಸಿರುವ ಅನನ್ಯ ಅಗರ್ವಾಲ್‌ ಟೀಕಿಸಿದ್ದಾರೆ.

2018ರ ಅನ್ವಯ ದುರ್ಬಲ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ 14ನೇ ಸ್ಥಾನದಲ್ಲಿದೆ ಎಂದು ನೆನಪಿಸಿದ ಅಗರ್ವಾಲ್‌,‘ಯುನೆಸ್ಕೊ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ಭಾರತದ ಮೇಲೆ ವಿಷಕಾರುವ ಹಾಗೂ ಜಮ್ಮು ಕಾಶ್ಮೀರ ವಿಷಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪಾಕಿಸ್ತಾನದ ನಡೆಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ’ ಎಂದು ಹೇಳಿದರು.

ADVERTISEMENT

‘ತೀವ್ರಗಾಮಿ ಸಿದ್ಧಾಂತ, ಸ್ಪಷ್ಟವಾಗಿ ಗೋಚರಿಸುವ ಭಯೋತ್ಪಾದನೆ ಸೇರಿದಂತೆ ಎಲ್ಲ ರೀತಿಯ ದುಷ್ಟಶಕ್ತಿಗಳಿಗೆ ಪಾಕಿಸ್ತಾನ ನೆಲೆಯಾಗಿದೆ’ ಎಂದರು.

ವಿಶ್ವಸಂಸ್ಥೆಯ ವೇದಿಕೆ ದುರ್ಬಳಕೆ:ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನದ ಸಂಚನ್ನು ಬಯಲಿಗೆಳೆದ ಅಗರ್ವಾಲ್‌, ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಸ್ತಾಪಿಸಿದ ಅಂಶಗಳನ್ನು ಉಲ್ಲೇಖಿಸಿದರು. ‘ವಿಶ್ವಸಂಸ್ಥೆಯ ವೇದಿಕೆಯಲ್ಲಿ ಅಣು ಯುದ್ಧ ಹಾಗೂ ಇತರೆ ರಾಷ್ಟ್ರಗಳ ವಿರುದ್ಧ ಶಸ್ತ್ರಾಸ್ತ್ರ ಬಳಕೆಗೆ ಕರೆ ನೀಡುತ್ತಾರೆ. ಎರಡು ರಾಷ್ಟ್ರಗಳ ನಡುವೆ ಅಣು ಯುದ್ಧ ನಡೆದರೆ ಅದರ ಪರಿಣಾಮ ಗಡಿಯಾಚೆಗೂ ಇರಲಿದೆ ಎಂದು ಭಾರತಕ್ಕೆ ಇಮ್ರಾನ್‌ ಖಾನ್‌ ಎಚ್ಚರಿಕೆ ನೀಡಿದ್ದರು’ ಎಂದರು.

ಉಗ್ರರು ‘ಹೀರೊ’ಗಳು: ‘ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್‌ ಮುಷರಫ್‌, ಉಗ್ರರಾದ ಒಸಮಾ ಬಿನ್‌ ಲಾಡೆನ್‌, ಐಮನ್‌ ಜವಾಹಿರಿ ಹಾಗೂ ಹಖ್ಖಾನಿ ನೆಟ್‌ವರ್ಕ್‌ ಅನ್ನು ಪಾಕಿಸ್ತಾನದ ಹೀರೊ ಎಂದು ಕರೆದಿದ್ದರು. ಇದನ್ನು ಇಲ್ಲಿರುವವರು ನಂಬತ್ತಾರೆಯೇ’ ಎಂದರು.

‘ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ’
‘ಪಾಕಿಸ್ತಾನಕ್ಕೆ ತನ್ನ ಮಣ್ಣಿನಲ್ಲಿ ಏನಾಗುತ್ತಿದೆ ಎನ್ನುವುದು ಗೋಚರಿಸುತ್ತಿಲ್ಲ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ. ಅವರ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. 1947ರಲ್ಲಿ ಪಾಕಿಸ್ತಾನ ಜನಸಂಖ್ಯೆಯ ಶೇ 23ರಷ್ಟಿದ್ದ ಅಲ್ಪಸಂಖ್ಯಾತರ ಪ್ರಮಾಣ ಇದೀಗ ಶೇ 3ಕ್ಕೆ ಇಳಿಕೆಯಾಗಿದೆ. ಮಹಿಳೆಯರ ಮೇಲೆ ಆ್ಯಸಿಡ್‌ ದಾಳಿ, ಬಾಲ್ಯ ವಿವಾಹ, ಒತ್ತಾಯಪೂರ್ವಕವಾದ ಮದುವೆಯಂಥ ಸಮಸ್ಯೆ ಪಾಕಿಸ್ತಾನದಲ್ಲಿ ಇಂದಿಗೂ ಮುಂದುವರಿದಿದೆ’ ಎಂದು ಅನನ್ಯ ಅಗರ್ವಾಲ್‌ ಹೇಳಿದರು.

‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’
ವಾಷಿಂಗ್ಟನ್‌ (ಪಿಟಿಐ):
‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಭಾರತ ಕೇವಲ 70 ವರ್ಷದ ಇತಿಹಾಸವುಳ್ಳ ರಾಷ್ಟ್ರವಲ್ಲ. ಅದಕ್ಕೆ 5 ಸಾವಿರ ವರ್ಷದ ಇತಿಹಾಸವಿದೆ. ಕಾಶ್ಮೀರವಿಲ್ಲದೆ ಭಾರತವಿಲ್ಲ. ಅದೇ ರೀತಿ ಭಾರತವಿಲ್ಲದೆ ಕಾಶ್ಮೀರವಿಲ್ಲ’. ಹೀಗೆ ಏರುದನಿಯಲ್ಲಿ ಸಾಕ್ಷ್ಯ ನುಡಿದವರು ಭಾರತೀಯ ಸಂಜಾತೆ ಅಂಕಣಗಾರ್ತಿ ಸುನಂದಾ ವಶಿಷ್ಠ.

ವಿಶೇಷಾಧಿಕಾರ ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿ ಅವಲೋಕಿಸಲು‘ದಿ ಟಾಮ್‌ ಲ್ಯಾಂಟೊಸ್‌ ಮಾನವ ಹಕ್ಕುಗಳ ಆಯೋಗ’ ನಡೆಸುತ್ತಿರುವವಿಚಾರಣೆಯಲ್ಲಿ ಸುನಂದಾ ಸಾಕ್ಷ್ಯ ನುಡಿದರು. ಆಯೋಗದ ವಿಚಾರಣೆ ವಿಫಲವಾಗಿದ್ದು, 84 ಸದಸ್ಯರ ಪೈಕಿ ಕೇವಲ ನಾಲ್ಕು ಸದಸ್ಯರು ಹಾಜರಿದ್ದರು.

ಅಯೋಧ್ಯೆ ತೀರ್ಪು: ಪಾಕ್‌ ಹೇಳಿಕೆಗಳಿಗೆ ವಿರೋಧ
ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ತೀರ್ಪಿಗೆ ಪಾಕಿಸ್ತಾನ ನೀಡಿರುವಂಥ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಅಗರ್ವಾಲ್‌, ‘ಎಲ್ಲ ಧರ್ಮದ ನಂಬಿಕೆಗಳಿಗೆ ಸಮಾನ ಗೌರವವನ್ನು ಈ ತೀರ್ಪು ನೀಡಿದೆ. ಇಂತಹ ಅಂಶಗಳ ಬಗ್ಗೆ ಪಾಕಿಸ್ತಾನಕ್ಕೆ ಅರಿವಿಲ್ಲ’ ಎಂದು ಕುಟುಕಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪು ಯುನೆಸ್ಕೊದ ಧಾರ್ಮಿಕ ಸ್ವಾತಂತ್ರ್ಯದ ಮೌಲ್ಯಗಳನ್ನು ಪಾಲಿಸಿಲ್ಲ ಎಂದು ಪಾಕಿಸ್ತಾನದ ಶಿಕ್ಷಣ ಸಚಿವ ಶಫ್ಕತ್‌ ಮೊಹಮ್ಮದ್‌ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.