ADVERTISEMENT

ಗಾಜಾದಲ್ಲಿ ಒಂದು ಪ್ಯಾಕ್‌ Parle-G ಬಿಸ್ಕತ್‌ ಬೆಲೆ ₹2 ಸಾವಿರ!

ಏಜೆನ್ಸೀಸ್
Published 8 ಜೂನ್ 2025, 12:37 IST
Last Updated 8 ಜೂನ್ 2025, 12:37 IST
<div class="paragraphs"><p>ಪಾರ್ಲೆ–ಜಿ ಬಿಸ್ಕಿತ್</p></div>

ಪಾರ್ಲೆ–ಜಿ ಬಿಸ್ಕಿತ್

   

ಗಾಜಾ: ಭಾರತದಲ್ಲಿ ಎಲ್ಲರ ಕೈಗೆಟಕುವಂತಿರುವ ಪಾರ್ಲೆ–ಜಿ ಬಿಸ್ಕತ್‌ ಸಂಘರ್ಷ ಪೀಡಿತ ಗಾಜಾದಲ್ಲಿ ಐಷಾರಾಮಿ ಆಹಾರವಾಗಿ ಮಾರ್ಪಟ್ಟಿದೆ. ತೀವ್ರ ಆಹಾರ ಕೊರತೆ ಎದುರಿಸುತ್ತಿರುವ ಗಾಜಾದಲ್ಲಿ ಒಂದು ಪ್ಯಾಕ್‌ ಬಿಸ್ಕತ್‌ 24 ಯುರೊಗೆ (ಸುಮಾರು ₹2,342) ಮಾರಾಟವಾಗುತ್ತಿದೆ. ಇದು ಭಾರತದಲ್ಲಿನ ಬೆಲೆಗಿಂತ 500 ಪಟ್ಟು ಹೆಚ್ಚು ಎಂದು ಟ್ರಿಬ್ಯೂನ್‌ ವೆಬ್‌ಸೈಟ್‌ ವರದಿ ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಮೊಹಮ್ಮದ್ ಜವಾದ್‌ ಎನ್ನುವ ವ್ಯಕ್ತಿ ಜೂನ್‌ 1 ರಂದು ವಿಡಿಯೊವೊಂದನ್ನು ಹಂಚಿಕೊಂಡು ಗಾಜಾದಲ್ಲಿ ಆಹಾರದ ಕೊರತೆ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ಹೇಳಿದ್ದರು.

ADVERTISEMENT

ಮೊಹಮ್ಮದ್‌ ಅವರು ಮಗಳು ಪಾರ್ಲೆ–ಜಿ ಬಿಸ್ಕತ್ತನ್ನು ಹಿಡಿದು ಖುಷಿಯಲ್ಲಿರುವ ವಿಡಿಯೊವನ್ನು ಹಂಚಿಕೊಂಡು ‘ಹಲವು ದಿನಗಳ ಬಳಿಕ ನನ್ನ ಮಗಳು ರಫೀಫ್‌ ಅವಳ ಇಷ್ಟದ ಬಿಸ್ಕತ್ತನ್ನು ಪಡೆದಿದ್ದಾಳೆ. ಬಿಸ್ಕತ್ತಿನ ಬೆಲೆ 1.5 ಯುರೊದಿಂದ 24 ಯುರೊಗೆ ಏರಿಕೆಯಾದರೂ ಅವಳ ಬೇಡಿಕೆಯನ್ನು ನಿರಾಕರಿಸಲು ಮನಸ್ಸಾಗಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.

ಈ ವಿಡಿಯೊಗೆ ಬಳಕೆದಾರರೊಬ್ಬರು, ‘ಭಾರತ ಪಾರ್ಲೆ–ಜಿಯನ್ನು ಪ್ಯಾಲೆಸ್ಟೀನ್‌ ಜನರಿಗೆ ನೆರವಿನ ರೂಪದಲ್ಲಿ ಕಳುಹಿಸಿತ್ತು. ಆದರೆ ಬಿಸ್ಕತ್‌ ಪ್ಯಾಕ್‌ ಹೊತ್ತ ಟ್ರಕ್ ಅನ್ನು ಹಮಾಸ್‌ ಸೆರೆಹಿಡಿದು, ಕಾಳಸಂತೆಯಲ್ಲಿ (ಬ್ಲಾಕ್‌ ಮಾರ್ಕೆಟ್) ಮಾರುತ್ತಿದೆ. ₹5 ಬಿಸ್ಕತ್‌ ಪ್ಯಾಕ್‌ ₹2,500ಕ್ಕೆ ಮಾರಾಟವಾಗುತ್ತಿದೆ’ ಎಂದು ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮೊಹಮ್ಮದ್, ‘ವಿದೇಶಿ ನೆರವು ಗಾಜಾ ಜನರಿಗೆ ಪ್ರಾಮಾಣಿಕವಾಗಿ ತಲುಪುತ್ತಿದೆ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಸತ್ಯಾಂಶ ಬೇರೆಯೇ ಇದೆ. ಏಜೆಂಟ್‌ಗಳು, ಕಳ್ಳರು ವಿದೇಶಿ ನೆರವಿನ ವಸ್ತುಗಳನ್ನು ಪಡೆದು ಭರಿಸಲಾಗದ ಬೆಲೆಗೆ ಮಾರುತ್ತಿದ್ದಾರೆ. ಇದನ್ನು ಕೊಳ್ಳಲಾಗದವರು ಜೀವವನ್ನೇ ಪಣಕ್ಕಿಡುತ್ತಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.