ವಾಷಿಂಗ್ಟನ್: ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಸೋಮವಾರ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.
ರೋಮನ್ ಕ್ಯಾಥೋಲಿಕ್ ಚರ್ಚ್‌ನ 266ನೇ ಪೋಪ್ ಆಗಿ 2013ರಲ್ಲಿ ಆಯ್ಕೆಯಾದ ಫ್ರಾನ್ಸಿಸ್ ಅವರು ಲ್ಯಾಟಿನ್ ಅಮೆರಿಕದಿಂದ ಆಯ್ಕೆಯಾದ ಮೊದಲ ಪೋಪ್ ಆಗಿದ್ದರು. ಸಾಮಾಜಿಕ ನ್ಯಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಸದಾ ದನಿ ಎತ್ತುತ್ತಿದ್ದರು.
ಕಳೆದ ತಿಂಗಳು ಮಾರ್ಚ್ 24ರಂದು ಶ್ವಾಸಕೋಶದ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪೋಪ್ ಅವರ ಆರೋಗ್ಯದಲ್ಲಿ ಅಂತಹ ಸುಧಾರಣೆ ಕಂಡುಬಂದಿರಲಿಲ್ಲ. ಈಸ್ಟರ್ ಭಾನುವಾರದ ಪ್ರಯುಕ್ತ ಏಪ್ರಿಲ್ 20ರಂದು ಅವರು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ಆಯ್ಕೆ ಪ್ರಕ್ರಿಯೆ ಹೇಗೆ?
ಪೋಪ್ ಆಯ್ಕೆಯು ಶತಮಾನಗಳಷ್ಟು ಹಳೆಯದಾದ ವ್ಯಾಟಿಕನ್ ಸಂಪ್ರದಾಯದಂತೆ ನಡೆಯುತ್ತದೆ. ಕಾಲೇಜ್ ಆಫ್ ಕಾರ್ಡಿನಲ್ಸ್ ಸದಸ್ಯರು ರಹಸ್ಯ ಮತದಾನ ಮಾಡುವ ಮೂಲಕ ಹೊಸ ಪೋಪ್ ಅನ್ನು ಆಯ್ಕೆ ಮಾಡುತ್ತಾರೆ. ಆದರೆ, 80 ವರ್ಷಕ್ಕಿಂತ ಮೇಲ್ಟಟ್ಟವರಿಗೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ.
ಒಟ್ಟು 252 ಕಾರ್ಡಿನಲ್‌ಗಳ ಪೈಕಿ 136 ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದು, ಭಾರತದ ನಾಲ್ವರು ಸೇರಿದ್ದಾರೆ. ಯುರೋಪ್ ಅತಿ ಹೆಚ್ಚು ಕಾರ್ಡಿನಲ್ಸ್‌ಗಳನ್ನು ಹೊಂದಿದ್ದು, ಆಫ್ರಿಕಾ, ಲ್ಯಾಟಿನ್ ಅಮೆರಿಕದ ನಂತರದ ಸ್ಥಾನಗಳಲ್ಲಿವೆ.
ಪೋಪ್ ನಿಧನವಾದ 15 ಅಥವಾ 20 ದಿನಗಳ ಬಳಿಕ ಮುಂದಿನ ಪೋಪ್‌ನ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತವೆ. ಪೋಪ್ ಆಯ್ಕೆಗಾಗಿ ಸಂತಾ ಮಾರ್ತಾನಲ್ಲಿ ಕಾರ್ಡಿನಲ್‌ಗಳ ಚರ್ಚೆಗಳು ನಡೆಯುತ್ತವೆ. ಸಿಸ್ಟೀನ್ ಛಾಪೆಲ್‌ನಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಸಂತಾ ಮಾರ್ತಾವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಕಾರ್ಡಿನಲ್‌ಗಳು ಹೊರ ಜಗತ್ತಿನ ಸಂಪರ್ಕವನ್ನು ಕಡಿದುಕೊಳ್ಳಬೇಕಾಗುತ್ತದೆ. ಮುಂದಿನ ಪೋಪ್‌ನ ಗುಣಲಕ್ಷಣಗಳು ಏನಿರಬೇಕು? ಚರ್ಚ್ ಮುಂದೆ ಇರುವ ಸವಾಲುಗಳೇನು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತವೆ. ಎಲ್ಲ ಕಾರ್ಡಿನಲ್‌ಗಳು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಚರ್ಚೆಯಲ್ಲಿ ಯಾರು ಹೇಗೆ ಮಾತನಾಡುತ್ತಾರೆ, ಅವರ ಧಾರ್ಮಿಕ ಜ್ಞಾನ, ಪಾಂಡಿತ್ಯಗಳ ಆಧಾರದಲ್ಲಿ ಕಾರ್ಡಿನಲ್‌ಗಳು ಅವರಲ್ಲೇ ಒಬ್ಬರನ್ನು ಆಯ್ಕೆ ಮಾಡುತ್ತಾರೆ.
ಹಲವು ದಿನಗಳವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಯಾವುದೇ ವ್ಯಕ್ತಿಗೆ ಮೂರನೇ ಎರಡರಷ್ಟು ಮತಗಳು ದೊರಕುವವರೆಗೂ ಪ್ರತಿನಿತ್ಯವೂ ಎರಡು ಬಾರಿ ಮತದಾನ ನಡೆಯಲಿದೆ. ಈ ಎಲ್ಲ ಪ್ರಕ್ರಿಯೆಗಳು ಬಹಳ ರಹಸ್ಯವಾಗಿ ನಡೆಯುತ್ತವೆ. ಪ್ರತಿ ಬಾರಿ ಮತದಾನ ನಡೆದ ಬಳಿಕ ಫಲಿತಾಂಶವನ್ನು ಬಹಿರಂಗ ಮಾಡಲಾಗುತ್ತದೆ. ಬಹುಮತ ಪಡೆದರೆ, ಫಲಿತಾಂಶ ಬಂದ ಒಂದು ಗಂಟೆಯ ಒಳಗೆ ನೂತನ ಪೋಪ್, ತಮ್ಮ ನಿವಾಸದ ಬಾಲ್ಕನಿಯಿಂದ ಕೈಬೀಸುತ್ತಾರೆ.
ಕಪ್ಪು ಮತ್ತು ಬಿಳಿ ಹೊಗೆ ಎಂಬ ಸಂಕೇತ
ನೂತನ ಪೋಪ್ ಆಯ್ಕೆಯ ಬಗ್ಗೆ ಪ್ರತಿನಿತ್ಯವೂ ಜನರಿಗೆ ಮಾಹಿತಿ ನೀಡಲಾಗುತ್ತದೆ. ಇದಕ್ಕಾಗಿ ಕಪ್ಪು ಮತ್ತು ಬಳಿ ಹೊಗೆಗಳೆಂಬ ಸಂಕೇತಗಳನ್ನು ರೂಪಿಸಿಕೊಳ್ಳಲಾಗಿದೆ. ಸಿಸ್ಟೀನ್ ಛಾಪೆಲ್ ಕಟ್ಟಡದಲ್ಲಿರುವ ಚಿಮಿಣಿಯ ಮೂಲಕ ಈ ಸಂಕೇತವನ್ನು ರವಾನಿಸಲಾಗುತ್ತದೆ. ಪೋಪ್ ಆಯ್ಕೆ ಪ್ರಕ್ರಿಯೆ ಪೂರ್ಣವಾಗಲಿಲ್ಲ ಎಂದರೆ, ಕಪ್ಪು ಹೊಗೆಯನ್ನು ಹೊರಸೂಸಲಾಗುತ್ತದೆ. ನೂತನ ಪೋಪ್ ಆಯ್ಕೆ ಪೂರ್ಣಗೊಂಡರೆ, ಬಿಳಿ ಹೊಗೆ ಬಿಡಲಾಗುತ್ತದೆ.
ಮತದಾನ ಪ್ರಕ್ರಿಯೆಯು ರಹಸ್ಯವಾಗಿ ನಡೆಯುತ್ತದೆ. ಆದ್ದರಿಂದ ಪ್ರತಿಬಾರಿ ಮತದಾನ ನಡೆದು ಫಲಿತಾಂಶ ಬಹಿರಂಗಗೊಂಡ ಬಳಿಕ ಮತಪತ್ರಗಳನ್ನು ಸುಡಲಾಗುತ್ತದೆ. ಪ್ರತಿನಿತ್ಯವೂ ಹೊಗೆಯ ಸಂಕೇತವನ್ನು ನೀಡಬೇಕಾಗಿರುವುದರಿಂದ ಮತಪತ್ರಗಳನ್ನೂ ಸುಡಲಾಗುತ್ತದೆ. ಸಾಂಪ್ರದಾಯಿಕವಾಗಿ ಕಪ್ಪು ಹೂಗೆ ಮೂಡಿಸಲು, ಮತಪತ್ರಗಳ ಜೊತೆಯಲ್ಲಿ ಒಣ ಹುಲ್ಲುಗಳನ್ನು ಸುಡಲಾಗುತ್ತಿತ್ತು. ಬಿಳಿ ಹೊಗೆಗಾಗಿ ಹಸಿ ಹಲ್ಲು ಬಳಸಲಾಗುತ್ತಿತ್ತು. ಆಧುನಿಕ ಯುಗದಲ್ಲಿ ರಾಸಾಯನಿಕಗಳನ್ನು ಬಳಸಿ ಹೊಗೆಯನ್ನು ಮೂಡಿಸಲಾಗುತ್ತದೆ.
ಮುಂದಿನ ಪೋಪ್ ಯಾರಾಗಬಹುದು?
ಕಾರ್ಡಿನಲ್ ಪಿಯೆಟ್ರೊ ಪಾರೊಲಿನ್, ಇಟಲಿ
ಕಾರ್ಡಿನಲ್ ಮಾರ್ಕ್ ಒಲೆಟ್, ಕೆನಡಾ
ಕಾರ್ಡಿನಲ್ ಕ್ರಿಸ್ಟೊಫ್ ಶೌನ್‌ಬೋರ್ನ್, ಆಸ್ಟ್ರಿಯಾ
ಕಾರ್ಡಿನಲ್ ಲೂಯಿಸ್ ಟ್ಯಾಗಲ್, ಫಿಲಿಪ್ಪೀನ್ಸ್
ಕಾರ್ಡಿನಲ್ ಮ್ಯಾಟೊ ಜುಪ್ಪಿ, ಇಟಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.