ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತಿಮ ದರ್ಶನಕ್ಕೆ ಜನರು ಕಾದು ಕೂತಿರುವ ದೃಶ್ಯ
ರಾಯಿಟರ್ಸ್ ಚಿತ್ರ
ವ್ಯಾಟಿಕನ್ ಸಿಟಿ: ಇತ್ತೀಚೆಗೆ ನಿಧನರಾದ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ಆರಂಭವಾಗಿವೆ. ಸೆಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಜಗತ್ತಿನ ಹಲವು ರಾಷ್ಟ್ರಗಳ ಗಣ್ಯರು ಪಾಲ್ಗೊಂಡಿದ್ದಾರೆ.
ಪೋಪ್ ಅವರ ಅಂತಿಮ ದರ್ಶನ ಪಡೆಯಲು ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅಂತ್ಯಕ್ರಿಯೆಯನ್ನು ಸರಳ ವಿಧಾನದಲ್ಲೇ ನಡೆಸುವಂತೆ ಮತ್ತು ಈ ಹಿಂದೆ ಇದ್ದ ವ್ಯಾಟಿಕನ್ ಸಂಪ್ರದಾಯಗಳನ್ನು ಆಚರಿಸದಂತೆ ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದರಿಂದ, ಅದೇ ಮಾದರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.
‘ಪೋಪ್ ಪಾತ್ರ ಪಾದ್ರಿಯೆ ಕೆಲಸವೇ ಹೊರತು, ಹೆಚ್ಚಿನದಲ್ಲ’ ಎಂದಿದ್ದ ಪೋಪ್ ಫ್ರಾನ್ಸಿಸ್ ಅವರು ಕಳೆದ 12 ವರ್ಷಗಳಿಂದ ಪೋಪ್ ಸ್ಥಾನಮಾನವನ್ನು ಸರಳೀಕರಿಸುವ ಯತ್ನ ನಡೆಸಿದ್ದರು. ಪ್ಯಾಸ್ಟರ್ ಎಂಬುವವರು ಸೇವಕರು ಎಂಬುದನ್ನು ಜನರಿಗೆ ಮನದಟ್ಟು ಮಾಡುವ ಮತ್ತು ಬಡವರಿಗೆ ಪುಟ್ಟ ಚರ್ಚ್‌ಗಳನ್ನು ನಿರ್ಮಿಸುವ ಯೋಜನೆಗೆ ಅವರು ಕೈಹಾಕಿದ್ದರು.
ಕಳೆದ ಭಾನುವಾರ ಈಸ್ಟರ್ ದಿನದಂದು ಭಕ್ತರಿಗೆ ದರ್ಶನ ನೀಡಿದ 88 ವರ್ಷದ ಪೋಪ್ ಫ್ರಾನ್ಸಿಸ್ ಸೋಮವಾರ ನಿಧನರಾದರು. ಶನಿವಾರ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್, ವಿಶ್ವ ಸಂಸ್ಥೆ ಅಧ್ಯಕ್ಷ, ಐರೋಪ್ಯ ಒಕ್ಕೂಟದ ಮುಖಂಡರು, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ವಿದೇಶಾಂಗ ಸಚಿವ ಕಿರಣ್ ರಿಜಿಜು, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಾರ್ಜ್ ಕುರಿಯನ್, ಗೋವಾ ವಿಧಾನಸಭೆಯ ಉಪಸಭಾಪತಿ ಜೋಶ್ವಾ ಡಿ ಸೋಜಾ, ಕರ್ನಾಟಕದಿಂದ ಸಚಿವ ಕೆ.ಜೆ. ಜಾರ್ಜ್ ಮತ್ತು ಐವಾನ್ ಡಿಸೋಜಾ ಪಾಲ್ಗೊಳ್ಳುತ್ತಿದ್ದಾರೆ.
ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಸೇಂಟ್ ಮೇರಿ ಮೇಜರ್ ಬೆಸಿಲಿಕಾದಲ್ಲಿ ನಡೆಯಲಿದೆ. ಇದು ರೋಮ್‌ನ ಮುಖ್ಯ ರೈಲ್ವೇ ಸ್ಟೇಷನ್ ಬಳಿ ಇದೆ. ಇಲ್ಲಿ ಸರಳವಾದ ಸಮಾದಿಗೆ ಸಿದ್ಧತೆ ನಡೆದಿದೆ. ಸಮಾದಿ ಮೇಲೆ ‘ಫ್ರಾನ್ಸಿಸ್’ ಎಂದಷ್ಟೇ ಇರಲಿದೆ.
ಈಗಾಗಲೇ ಸಾಕಷ್ಟು ಜನ ಅಂತಿಮ ದರ್ಶನಕ್ಕೆ ಸರತಿ ಸಾಲಿನಲ್ಲಿ ಕಾದು ನಿಂತಿದ್ದಾರೆ. ಭದ್ರತೆಗಾಗಿ ಇಟಲಿ ಸರ್ಕಾರವು 2,500 ಪೊಲೀಸರು ಮತ್ತು 1,500 ಸೈನಿಕರನ್ನು ನಿಯೋಜಿಸಿದೆ ಎಂದು ಇಟಲಿ ಪತ್ರಿಕೆಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.