ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪಿಟಿಐ ಚಿತ್ರ
ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದು, ಉಭಯ ದೇಶಗಳ ನಾಯಕರ ಅಚಲ ಮತ್ತು ಬಲವಾದ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಎರಡೂ ರಾಷ್ಟ್ರಗಳ ಕ್ರಮಗಳಿಂದ ಅವರ ನಡುವಿನ ಪರಂಪರೆ ವೃದ್ಧಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.
ಶನಿವಾರ ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣಾ ರೇಖೆಯಲ್ಲಿ ಕದನ ವಿರಾಮಕ್ಕೆ ಒಪ್ಪಂದ ಮಾಡಿಕೊಂಡಿತ್ತು. ಈ ಕುರಿತು ಟ್ರಂಪ್, ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಈ ಕುರಿತು ಟ್ರುತ್ ಸೋಶಿಯಲ್‌ನಲ್ಲಿ ಬರೆದುಕೊಂಡಿರುವ ಟ್ರಂಪ್, ‘ಅನೇಕರ ಸಾವು ಮತ್ತು ವಿನಾಶಕ್ಕೆ ಕಾರಣವಾಗಬಹುದಾದ ಪ್ರಸ್ತುತ ಆಕ್ರಮಣವನ್ನು ನಿಲ್ಲಿಸುವ ಸಮಯ ಬಂದಿದೆ ಎಂಬುದನ್ನು ತಿಳಿದು, ಅರ್ಥಮಾಡಿಕೊಳ್ಳುವ ಶಕ್ತಿಶಾಲಿ ನಾಯಕತ್ವವು ಹೊಂದಿದ್ದಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಲಕ್ಷಾಂತರ ಮುಗ್ಧ ಜನರ ಸಾವಾಗಬಹುದಿತ್ತು. ಆದರೆ ನಿಮ್ಮ ಅಚಲ ನಿರ್ಧಾರದಿಂದ ಪರಂಪರೆ ವೃದ್ಧಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಅಮೆರಿಕದ ನಾಯಕತ್ವವನ್ನು ಹೊಗಳಿದ ಟ್ರಂಪ್, ‘ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡಲು ಅಮೆರಿಕಕ್ಕೆ ಸಾಧ್ಯವಾಯಿತು ಎಂದು ನನಗೆ ಹೆಮ್ಮೆ ಇದೆ. ನಾವಿನ್ನೂ ಚರ್ಚಿಸಿಲ್ಲ ಆದರೂ ಈ ಎರಡೂ ರಾಷ್ಟ್ರಗಳೊಂದಿಗೆ ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಸಾವಿರ ವರ್ಷಗಳಿಂದ ಕಾಶ್ಮೀರ ಸಮಸ್ಯೆಯಿದೆ. ಹೀಗಾಗಿ ಸಮಸ್ಯೆ ಬಗೆಹರಿಸಿ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಅಮೆರಿಕ ಕೆಲಸ ಮಾಡಲಿದೆ. ಒಟ್ಟಿನಲ್ಲಿ ಉತ್ತಮ ಕೆಲಸಕ್ಕಾಗಿ ಭಾರತ ಮತ್ತು ಪಾಕಿಸ್ತಾನಕ್ಕೆ ದೇವರು ಆಶೀರ್ವದಿಸಲಿ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.