ADVERTISEMENT

ರಷ್ಯಾ ಒತ್ತೆಯಾಳುಗಳ ಬಿಡುಗಡೆ: ಹಮಾಸ್‌ಗೆ ಧನ್ಯವಾದ ಹೇಳಿದ ಅಧ್ಯಕ್ಷ ಪುಟಿನ್

ಪಿಟಿಐ
Published 17 ಏಪ್ರಿಲ್ 2025, 9:39 IST
Last Updated 17 ಏಪ್ರಿಲ್ 2025, 9:39 IST
<div class="paragraphs"><p>ರಷ್ಯಾಗೆ ಬಂದಿಳಿದ ಅಲೆಕ್ಸಾಂಡರ್ ಟ್ರುಫಾನೋವ್ ಅವರನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬರಮಾಡಿಕೊಂಡರು</p></div>

ರಷ್ಯಾಗೆ ಬಂದಿಳಿದ ಅಲೆಕ್ಸಾಂಡರ್ ಟ್ರುಫಾನೋವ್ ಅವರನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬರಮಾಡಿಕೊಂಡರು

   

ರಾಯಿಟರ್ಸ್ ಚಿತ್ರ

ಮಾಸ್ಕೊ: ಇಸ್ರೇಲ್‌ ವಿರುದ್ಧ 2023ರ ಅಕ್ಟೋಬರ್‌ನಲ್ಲಿ ಆರಂಭವಾದ ಕದನದಲ್ಲಿ ಒತ್ತೆ ಇರಿಸಿಕೊಂಡಿದ್ದ ರಷ್ಯಾದ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಧನ್ಯವಾದ ಹೇಳಿದ್ದಾರೆ. 

ADVERTISEMENT

ಬಿಡುಗಡೆಗೊಂಡ ರಷ್ಯಾ ನಾಗರಿಕರಾದ ಅಲೆಕ್ಸಾಂಡರ್ ಟ್ರುಫಾನೋವ್ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರನ್ನು ಪುಟಿನ್ ಬರಮಾಡಿಕೊಂಡರು ಎಂದು ಇಂಟ್ರಾಫ್ಯಾಕ್ಸ್ ಏಜೆನ್ಸಿ ತಿಳಿಸಿದೆ.

‘ಪ್ಯಾಲೆಸ್ಟೀನ್ ಜನರೊಂದಿಗೆ ರಷ್ಯಾ ಸುದೀರ್ಘ ಕಾಲ ಹೊಂದಿರುವ ಸೌಹಾರ್ದ ಸಂಬಂಧ ಹೊಂದಿರುವುದರಿಂದ ನೀವು ಇಲ್ಲಿಗೆ ಸುರಕ್ಷಿತವಾಗಿ ಮರಳಿದ್ದೀರಿ. ಮಾನವೀಯ ನೆಲೆಗಟ್ಟಿನಲ್ಲಿ ರಷ್ಯಾದ ನಾಗರಿಕರನ್ನು ಬಿಡುಗಡೆ ಮಾಡಿರುವ ಹಮಾಸ್‌ನ ನಾಯಕತ್ವಕ್ಕೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಪುಟಿನ್ ಹೇಳಿದ್ದಾರೆ.

2023ರ ಅ. 7ರಂದು ಇಸ್ರೇಲ್‌ ಮೇಲೆ ಹಮಾಸ್ ದಾಳಿ ನಡೆಸಿದ ನಂತರ ಆರಂಭಗೊಂಡ ಕದನದಲ್ಲಿ ಈವರೆಗೂ ಸುಮಾರು 1,200 ಜನ ಮೃತರಾಗಿದ್ದು, 251 ಜನರು ಒತ್ತೆಯಾಳುಗಳನ್ನಾಗಿ ಇರಿಸಲಾಗಿದೆ. ಇಸ್ರೇಲ್‌ ನಡೆಸಿದ ಪ್ರತಿದಾಳಿಯಲ್ಲಿ 50 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನ್‌ ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

ಹಮಾಸ್‌ ಬಿಡುಗಡೆ ಮಾಡಿದ ಟ್ರುಫಾನೋವ್‌ ಅವರೊಂದಿಗೆ ಅವರ ತಾಯಿ, ಅಜ್ಜಿ ಮತ್ತು ಗೆಳತಿಯೂ ಅಪಹರಣಕ್ಕೊಳಗಾಗಿದ್ದರು. ಇವರನ್ನು ಗಾಜಾ ಪಟ್ಟಿಯಲ್ಲಿ ಇರಿಸಲಾಗಿತ್ತು. ಈ ಕುಟುಂಬದ ಹಿರಿಯ ವೈಟಲಿ ಟ್ರುಫನೋವ್‌ ದಾಳಿಯಲ್ಲಿ ಮೃತಪಟ್ಟಿದ್ದರು. ಅಪಹರಣಗೊಂಡು 53 ದಿನಗಳ ನಂತರ ತಾಯಿ, ಅಜ್ಜಿ ಹಾಗೂ ಗೆಳತಿಯನ್ನು ಬಿಡುಗಡೆ ಮಾಡಲಾಗಿತ್ತು. 

ಅಲೆಕ್ಸಾಂಡರ್‌ ಅವರು 500 ದಿನಗಳ ಕಾಲ ಹಮಾಸ್‌ ಒತ್ತೆಯಾಳಾಗಿದ್ದರು. 2025ರ ಫೆ. 15ರಂದು ಘೋಷಿಸಲಾದ ಕದನವಿರಾಮದಲ್ಲಿ ಬಿಡುಗಡೆಗೊಂಡಿದ್ದರು. ಅವರು ಬುಧವಾರ (ಏ. 16) ರಾತ್ರಿ ರಷ್ಯಾ ತಲುಪಿದ್ದಾರೆ. 

ಇಸ್ರೇಲ್‌ನಲ್ಲಿ ರಷ್ಯಾದ ಪೌರತ್ವ ಹೊಂದಿರುವವರು ನೆಲೆಸಿದ್ದಾರೆ. ಒತ್ತೆಯಾಳಾಗಿರುವ ಉಳಿದವರ ಬಿಡುಗಡೆಗೆ ನೆರವಾಗುವುದಾಗಿ ಪುಟಿನ್ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.