ADVERTISEMENT

ಪುಟಿನ್‌– ಝೆಲೆನ್‌ಸ್ಕಿ ಭೇಟಿ ಕುರಿತು ಭರವಸೆ ವ್ಯಕ್ತಪಡಿಸಿದ ಉಕ್ರೇನ್‌

ಏಜೆನ್ಸೀಸ್
Published 30 ಮಾರ್ಚ್ 2022, 1:17 IST
Last Updated 30 ಮಾರ್ಚ್ 2022, 1:17 IST
ವ್ಲಾಡಿಮಿರ್ ಪುಟಿನ್- ವೊಲೊಡಿಮಿರ್ ಝೆಲೆನ್‌ಸ್ಕಿ
ವ್ಲಾಡಿಮಿರ್ ಪುಟಿನ್- ವೊಲೊಡಿಮಿರ್ ಝೆಲೆನ್‌ಸ್ಕಿ   

ಇಸ್ತಾಂಬುಲ್: ರಷ್ಯಾ-ಉಕ್ರೇನ್ ಕದನಕ್ಕೆ ವಿರಾಮ ನೀಡಲು ಮಂಗಳವಾರ ಟರ್ಕಿಯಲ್ಲಿ ನಡೆದ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದು, ಉಭಯ ದೇಶಗಳ ಅಧ್ಯಕ್ಷರ ನಡುವಿನ ಸಭೆಯನ್ನು ಸಾಧ್ಯವಾಗಿಸಲು ನೆರವಾಗಿದೆ ಎಂದು ಉಕ್ರೇನ್‌ನ ಮುಖ್ಯ ಸಂಧಾನಕಾರು ತಿಳಿಸಿದ್ದಾರೆ.

'ಇಂದು ನಡೆದ ಸಭೆಯ ಫಲಿತಾಂಶಗಳು ನಾಯಕರ ಮಟ್ಟದ ಸಭೆಗೆ ಸಾಕಾಗುತ್ತದೆ' ಎಂದಿರುವ ಅವರು, ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತು ವ್ಲಾಡಿಮಿರ್ ಪುಟಿನ್ ನಡುವಿನ ಸಭೆಯ ಸಾಧ್ಯತೆಯನ್ನು ಈ ಸಭೆ ಹೆಚ್ಚಿಸಿದೆ ಎಂದು ಉಕ್ರೇನ್ ಸಂಧಾನಕಾರ ಡೇವಿಡ್ ಅರಾಖಮಿಯಾ ಹೇಳಿದರು.

ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ಒಂದು ತಿಂಗಳ ನಂತರ ಉಕ್ರೇನ್ ಪ್ರತಿನಿಧಿಗಳೊಂದಿಗೆ ಇಸ್ತಾಂಬುಲ್‌ನಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ 'ಅರ್ಥಪೂರ್ಣ' ಪ್ರಗತಿ ಆಗಿರುವುದನ್ನು ರಷ್ಯಾದ ಸಂಧಾನಕಾರರು ಸ್ವಾಗತಿಸಿದ್ದಾರೆ.

ಯುದ್ಧ ಪೀಡಿತ ಉಕ್ರೇನ್‌ನ ಪ್ರದೇಶಗಳಲ್ಲಿ ಮಾನವೀಯ ಪರಿಸ್ಥಿತಿ ಮತ್ತು ಇತರ ವಿಚಾರಗಳ ನಡುವೆ ಉಕ್ರೇನ್ ತಟಸ್ಥ ನೀತಿಯನ್ನು ಅನುಸರಿಸಬೇಕು ಎನ್ನುವ ರಷ್ಯಾದ ಬೇಡಿಕೆಯ ಮೇಲೆ ಚರ್ಚೆಗಳು ಕೇಂದ್ರೀಕೃತವಾಗಿವೆ.

ಫೆ.24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ್ದರು. ಅಂದಿನಿಂದ ರಷ್ಯಾ ಪಡೆಗಳು ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಯೋಧರು, ನಾಗರಿಕರು ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪುಟಿನ್ ನಡೆಗೆ ವಿಶ್ವ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಈಗಾಗಲೇ ರಷ್ಯಾ ಮೇಲೆ ಹಲವಾರು ನಿರ್ಬಂಧ ವಿಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.