ADVERTISEMENT

2ನೇ ಹಂತದ ಸೇನಾ ಕಾರ್ಯಾಚರಣೆ: ರಷ್ಯಾದಿಂದ ಎಸ್‌–400 ಕ್ಷಿಪಣಿ ತಾಲೀಮು

ರಾಯಿಟರ್ಸ್
Published 26 ಮಾರ್ಚ್ 2022, 19:45 IST
Last Updated 26 ಮಾರ್ಚ್ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೊ: ಉಕ್ರೇನ್‌ ಮೇಲೆ ಮೊದಲ ಹಂತದ ವಿಶೇಷ ಸೇನಾ ಕಾರ್ಯಾಚರಣೆ ಪೂರ್ಣಗೊಳಿಸಿರುವ ರಷ್ಯಾ ತನ್ನ ಬತ್ತಳಿಕೆಯಲ್ಲಿರುವ ಅತ್ಯಾಧುನಿಕ ಮತ್ತು ಮಾರಕ ಎಸ್‌–400 ಕ್ಷಿಪಣಿ ವ್ಯವಸ್ಥೆಯ ತಾಲೀಮನ್ನು ಪಶ್ಚಿಮ ಕಲಿನನ್‌ಗ್ರಾಡ್‌ನ ಗಡಿಯಲ್ಲಿ ನಡೆಸುತ್ತಿದೆ ಎಂದು‘ಇಂಟರ್‌ ಫಾಕ್ಸ್‌’ ಸುದ್ದಿ ಸಂಸ್ಥೆ ಶನಿವಾರ ಹೇಳಿದೆ.

ಉಕ್ರೇನ್‌ ಆಕ್ರಮಣದಲ್ಲಿ ನಿರೀಕ್ಷಿತ ಜಯ ಸಿಗದೆ ನಿರಾಸೆಗೊಂಡಂತಿರುವ ರಷ್ಯಾ ಯುದ್ಧ ತಂತ್ರ ಬದಲಿಸುವ ಮತ್ತು ಉಕ್ರೇನ್‌ ಮೇಲೆ ಮತ್ತಷ್ಟು ಭೀಕರ ದಾಳಿಗೆ ಇಳಿಯುವ ಸುಳಿವು ನೀಡಿದೆ.

ಸುಖೊಯ್‌ –27 ಯುದ್ಧ ವಿಮಾನಗಳನ್ನು ಸಹ ಸಮರಾಭ್ಯಾಸಕ್ಕೆ ನಿಯೋಜಿಸಿದೆ. ಜಪಾನ್‌ ಹಕ್ಕು ಸಾಧಿಸುತ್ತಿರುವ ದ್ವೀಪದಲ್ಲೂ ರಷ್ಯಾ ಎಸ್‌–400 ಕ್ಷಿಪಣಿ ವ್ಯವಸ್ಥೆಯ ತಾಲೀಮು ನಡೆಸಿತು ಎಂದುಅದು ವರದಿ ಮಾಡಿದೆ.

ADVERTISEMENT

ಮೊದಲ ಹಂತದ ಆಕ್ರಮಣ ಯಶಸ್ವಿ(ರಷ್ಯಾ ಸೇನೆ ಕೀವ್‌ ವರದಿ): ಉಕ್ರೇನ್‌ನಲ್ಲಿ ಮೊದಲ ಹಂತದ ವಿಶೇಷ ಸೇನಾ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಿದೆ. ಈಗ ಪೂರ್ವ ಉಕ್ರೇನಿನ ಡಾನ್‌ಬಾಸ್‌ ಪ್ರದೇಶದ ಸಂಪೂರ್ಣ ವಿಮೋಚನೆಯ ಮೇಲೆ ತಮ್ಮ ಪಡೆಗಳು ಗಮನ ಕೇಂದ್ರೀಕರಿಸಿವೆ ಎಂದು ರಷ್ಯಾ ಸೇನೆ ಹೇಳಿದೆ.

ರಷ್ಯಾ ಉಕ್ರೇನ್‌ ಮೇಲಿನ ಪೂರ್ಣ ಪ್ರಮಾಣದ ಆಕ್ರಮಣದಿಂದ ಹಿಂದೆ ಸರಿಯುವ ಮತ್ತು ತನ್ನ ಗಮನವನ್ನು ರಷ್ಯಾ ಪರ ಪ್ರತ್ಯೇಕವಾದಿಗಳು ಹಕ್ಕು ಸಾಧಿಸುತ್ತಿರುವ ತನ್ನ ಗಡಿಯಲ್ಲಿನ ಪೂರ್ವ ಪ್ರದೇಶದ ಮೇಲೆ ಗಮನ ಕೇಂದ್ರೀಕರಿಸುವ ಸೂಚನೆ ನೀಡುತ್ತಿದ್ದಂತೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಮತ್ತೆ ನೇರ ಶಾಂತಿ ಮಾತುಕತೆ ಆರಂಭಿಸಲು ರಷ್ಯಾ ಅಧ್ಯಕ್ಷ ಪುಟಿನ್‌ ಅವರನ್ನು ಒತ್ತಾಯಿಸಿದ್ದಾರೆ.

ಕಾರ್ಯಚಟುವಟಿಕೆ ಸ್ಥಗಿತಗೊಳಿಸಿರುವ ಚೆರ್ನೊಬಿಲ್‌ ಅಣು ವಿದ್ಯುತ್‌ ಸ್ಥಾವರದ ಕಾರ್ಮಿಕರು ವಾಸಿಸುವ ಸ್ಲವ್ಯುಟಿಕ್‌ಪಟ್ಟಣವನ್ನು ರಷ್ಯಾದ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಕೀವ್‌ ಗವರ್ನರ್ ಒಲೆಕ್ಸಾಂಡರ್ ಪ್ಯಾವುಲಕ್‌ ಹೇಳಿದ್ದಾರೆ.

ರಾಜಧಾನಿ ಕೀವ್‌ನಲ್ಲಿ ಶನಿವಾರ ರಾತ್ರಿ 8ರಿಂದ ಜಾರಿಗೆ ಬರುವಂತೆ ಸೋಮವಾರ ಬೆಳಿಗ್ಗೆ 7ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಕರ್ಫ್ಯೂ ಬಿಗಿಗೊಳಿಸಲು ಮಿಲಿಟರಿ ಕಮಾಂಡ್‌ ನಿರ್ಧರಿಸಿದೆ’ ಎಂದು ನಗರದ ಮೇಯರ್‌ ವಿಟಾಲಿ ಕ್ಲಿಟ್‌ಸ್ಕೊ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.