
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಕೃಪೆ: ಪಿಟಿಐ
ಮಾಸ್ಕೊ: ‘ಭಾರತವು ಯಾವುದೇ ದೇಶದಿಂದ ಬೇಕಿದ್ದರೂ ತೈಲ ಖರೀದಿಸಬಹುದು. ಭಾರತಕ್ಕೆ ರಷ್ಯಾ ಮಾತ್ರ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುತ್ತಿಲ್ಲ. ದೇಶವೊಂದು ಯಾರಿಂದ ಬೇಕಿದ್ದರೂ ತೈಲ ಖರೀದಿಸಬಹುದು. ಇದರಲ್ಲಿ ಹೊಸತೇನಿಲ್ಲ’ ಎಂದು ರಷ್ಯಾ ಪ್ರತಿಕ್ರಿಯಿಸಿದೆ.
ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರ ಹೇಳಿಕೆ ಕುರಿತ ಪತ್ರಕರ್ತರ ಪ್ರಶ್ನೆಗೆ ರಷ್ಯಾದ ವಕ್ತಾರ ಡಿಮಿತ್ರಿ ಪೆಸ್ಕೊ ಉತ್ತರಿಸಿದರು. ರಷ್ಯಾದ ‘ರಾಷ್ಟ್ರೀಯ ವಿದ್ಯುತ್ ಭದ್ರತಾ ನಿಧಿ’ ಸಂಸ್ಥೆಯ ತಜ್ಞರು ಈ ಬಗ್ಗೆ ಪ್ರತಿಕ್ರಿಯಿಸಿ, ‘ರಷ್ಯಾದಿಂದ ತೈಲ ಖರೀದಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಭಾರತಕ್ಕೆ ಸಾಧ್ಯವಿಲ್ಲ’ ಎಂದಿದ್ದಾರೆ.
‘ಅಮೆರಿಕದ ಬಳಿ ಇರುವ ಶೇಲ್ ಕಚ್ಚಾ ತೈಲವು (ಸಾಮಾನ್ಯ ಕಚ್ಚಾ ತೈಲಕ್ಕಿಂತ ಸಾರಜನಕ ಮತ್ತು ಗಂಧಕದ ಪ್ರಮಾಣ ವಿಪರೀತವಾಗಿರುವ ಕಚ್ಚಾ ತೈಲ) ಸಾಂದ್ರೀಕೃತ ಅನಿಲದ ರೀತಿಯಲ್ಲಿರುತ್ತವೆ. ಭಾರತವು ಇದನ್ನು ಇತರೆ ಕಚ್ಚಾ ತೈಲದೊಂದಿಗೆ ಮಿಶ್ರಣ ಮಾಡಲೇ ಬೇಕಾಗುತ್ತದೆ. ಇದಕ್ಕೆ ಹೆಚ್ಚು ಹಣ ಬೇಕಾಗುತ್ತದೆ’ ಎಂದಿದ್ದಾರೆ.
‘ರಷ್ಯಾವು ಭಾರತಕ್ಕೆ 15 ಲಕ್ಷ ಬ್ಯಾರಲ್‌ನಿಂದ 20 ಲಕ್ಷ ಬ್ಯಾರೆಲ್ ತೈಲ ರಫ್ತು ಮಾಡುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೈಲ ರಫ್ತು ಮಾಡಲು ಅಮೆರಿಕಕ್ಕೆ ಸಾಧ್ಯವೇ ಇಲ್ಲ. ಭಾರತದೊಂದಿಗೆ ವ್ಯಾಪಾರ ಒಪ್ಪಂದ ಕುದುರಿಸಿಕೊಂಡು ಗೆದ್ದು ಬಿಟ್ಟೆ ಎಂದು ಟ್ರಂಪ್ ಬೀಗುತ್ತಿದ್ದಾರೆ. ಅಮೆರಿಕದ ಆಗ್ರಹದ ಮೇರೆಗೇ ಈ ಒಪ್ಪಂದ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.