ADVERTISEMENT

ರಷ್ಯಾ ಬಿರುಸಿನ ದಾಳಿ: ಉಕ್ರೇನ್‌ ನಗರಗಳಿಂದ 6,623 ನಾಗರಿಕ ಸ್ಥಳಾಂತರ

ಏಜೆನ್ಸೀಸ್
Published 20 ಮಾರ್ಚ್ 2022, 18:54 IST
Last Updated 20 ಮಾರ್ಚ್ 2022, 18:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮರಿಯುಪೊಲ್‌: ಯುದ್ಧಪೀಡಿತ ಉಕ್ರೇನ್‌ನ ನಗರಗಳಲ್ಲಿರುವ ಜನರನ್ನು ಎಂಟು ಮಾನವ ಕಾರಿಡಾರ್‌ಗಳ ಮೂಲಕ ಒಟ್ಟು 6,623 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.ಮರಿಯುಪೊಲ್‌ನಿಂದಲೇ 4,128 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್ ಉಪ ಪ್ರಧಾನಿ ಇರೀನಾ ವರೆಶ್‌ಚುಕ್ ಹೇಳಿದ್ದಾರೆ.

ಬಂದರು ಸಿಟಿ ಮರಿಯುಪೊಲ್‌ ಸೇರಿದಂತೆ ಮತ್ತಿತ್ತರ ನಗರಗಳಲ್ಲಿ ರಷ್ಯಾ ಪಡೆಗಳು ಬಿರುಸಿನ ದಾಳಿಯನ್ನು ಮುಂದುವರಿಸಿದೆ. ಹೀಗಾಗಿ ಅಲ್ಲಿನ ಉಕ್ಕಿನ ಘಟಕವನ್ನು ಮುಚ್ಚಲಾಗಿದೆ.

ಮಕ್ಕಳು ಮತ್ತು ಹಿರಿಯ ನಾಗರಿಕರು ಅಸುನೀಗುತ್ತಿದ್ದಾರೆ. ನಗರವನ್ನು ಪೂರ್ತಿಯಾಗಿ ನಾಶ ಮಾಡಲಾಗಿದೆ. ಭೂಮಿಯಿಂದ ಈ ನಗರವನ್ನೇ ಅಳಿಸಿ ಹಾಕಲಾಗಿದೆಯೆಂದುಮರಿಯುಪೊಲ್‌ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಲ್ಲದೆ ಮರಿಯುಪೊಲ್‌ ನಗರದ ಜನರನ್ನು ರಷ್ಯಾದಲ್ಲಿ ನೆಲೆಸುವಂತೆ ರಷ್ಯಾದ ಯೋಧರು ಬಲವಂತಪಡಿಸುತ್ತಿದ್ದಾರೆ ಎಂದು ಮರಿಯುಪೂಲ್‌ ನಗರದ ಕೌನ್ಸಿಲ್ ದೂರಿದ್ದಾರೆ.

ರಷ್ಯಾ-ಉಕ್ರೇನ್ ಸಂಘರ್ಷ: 25ನೇ ದಿನದ ಬೆಳವಣಿಗೆಗಳು

*ಮರಿಯುಪೊಲ್‌ ನಗರದ ಮೇಲೆ ರಷ್ಯಾ ಪಡೆಗಳು, ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಳಿಂದ ಏಕ ಕಾಲಕ್ಕೆ ರಾಕೆಟ್‌ ಮತ್ತು ಬಾಂಬ್‌ಗಳ ಸುರಿಮಳೆ ಗರೆಯುತ್ತಿವೆ

*ಮೈಕೊಲೈವ್‌ ನಗರದ ಸೇನಾ ಶಿಬಿರಗಳ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿಗೆ ಕನಿಷ್ಠ 40 ಮಂದಿ ನೌಕಾಪಡೆ ಸಿಬ್ಬಂದಿ ಹತರಾಗಿದ್ದಾರೆ

*ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಮತ್ತೊಮ್ಮೆ ರಷ್ಯಾ ಅಧ್ಯಕ್ಷ ಪುಟಿನ್‌ ಅವರಿಗೆ ಯುದ್ಧ ನಿಲ್ಲಿಸಿ,ನೇರ ಮಾತುಕತೆಗೆ ಬರಲು ಒತ್ತಾಯಿಸಿದ್ದಾರೆ

*ಲುಹಾನ್‌ಸ್ಕ್‌ ಪ್ರದೇಶದ ಕ್ರೆಮಿನ್ನಾ ನಗರದಲ್ಲಿ ಹಿರಿಯ ನಾಗರಿಕರಿದ್ದ ಮನೆಗಳ ಮೇಲೆ ರಷ್ಯಾ ಪಡೆಗಳು ನಡೆಸಿದ ದಾಳಿಗೆಮಾರ್ಚ್‌ 11ರಿಂದ ಈವರೆಗೆ 56 ನಾಗರಿಕರು ಹತರಾಗಿದ್ದಾರೆ

*ಯುದ್ಧಪೀಡಿತ ನಗರಗಳಲ್ಲಿ 10 ಮಾನವೀಯ ಕಾರಿಡಾರ್‌ಗಳ ಪೈಕಿ ಎಂಟರಲ್ಲಿ ಶನಿವಾರ6,623 ಜನರನ್ನು ಸ್ಥಳಾಂತರಿಸಲಾಯಿತು.

*ರಷ್ಯಾದ ಆಕ್ರಮಣದಿಂದ ಉಕ್ರೇನ್‌ನಲ್ಲಿ ಈವರೆಗೆ 902 ನಾಗರಿಕರು ಮೃತಪಟ್ಟಿದ್ದಾರೆ. 1,459 ನಾಗರಿಕರು ಗಾಯಗೊಂಡಿದ್ದಾರೆ– ವಿಶ್ವಸಂಸ್ಥೆ

*ಉಕ್ರೇನ್‌ನಲ್ಲಿ ಈವರೆಗೆ ಒಂದು ಕೋಟಿ ಜನರು ನಿರಾಶ್ರಿತರಾಗಿದ್ದಾರೆ– ವಿಶ್ವಸಂಸ್ಥೆ ನಿರಾಶ್ರಿತರ ಏಜೆನ್ಸಿ ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ

*ಉಕ್ರೇನ್ ಬಿಕ್ಕಟ್ಟಿಗೆ ಕಾರಣವಾದ ನ್ಯಾಟೊದ ವಿಸ್ತರಣಾವಾದದಂತೆಯೇ ಅಮೆರಿಕದ ಇಂಡೋ-ಪೆಸಿಫಿಕ್ ತಂತ್ರಗಾರಿಕೆಯು ‘ಅಪಾಯಕಾರಿ’ –ಚೀನಾ ಆತಂಕ

*ರಷ್ಯಾದ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿರುವ ಪೋಪ್‌ ಫ್ರಾನ್ಸಿಸ್‌, ಉಕ್ರೇನ್‌ನಲ್ಲಿನ ಸಂಘರ್ಷ ಅಸಮಂಜಸ. ಹೀನ ಹತ್ಯಾಕಾಂಡ ಮತ್ತು ಅಸಹ್ಯಕರ ಯುದ್ಧ ತಕ್ಷಣ ನಿಲ್ಲಿಸಬೇಕೆಂದು ಪುಟಿನ್‌ಗೆ ಒತ್ತಾಯಿಸಿದ್ದಾರೆ

*ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಚೀನಾ ರಷ್ಯಾ ಪರವಿರುವ ಸೂಚನೆ ಕಾಣಿಸುತ್ತಿದೆ. ಆದರೆ, ಉಕ್ರೇನ್‌ ಪರ ನಿಲ್ಲಬೇಕು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಚೀನಾಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ

*ಉಕ್ರೇನ್‌ ಬಿಕ್ಕಟ್ಟಿನಲ್ಲಿ ಭಾರತದ ನಿಲುವನ್ನು ಕ್ವಾಡ್‌ ರಾಷ್ಟ್ರಗಳು ಒಪ್ಪಿವೆ. ಸಂಘರ್ಷ ಕೊನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪರ್ಕಗಳನ್ನು ಬಳಸುತ್ತಿರುವುದು ಸ್ಪಷ್ಟವಾಗಿದೆ– ಆಸ್ಟ್ರೇಲಿಯಾ ಹೇಳಿಕೆ

*ಉಕ್ರೇನ್‌ ನೆಲದಲ್ಲಿ ಯೋಧರ ಕೊರತೆಯಿಂದಾಗಿ ರಷ್ಯಾ ಈಗ ವೈಮಾನಿಕ ಮತ್ತು ಕ್ಷಿಪಣಿ ದಾಳಿಗೆ ಒತ್ತು ನೀಡುತ್ತಿದೆ –ಬ್ರಿಟನ್‌ ಸಚಿವಾಲಯ

*ಯುದ್ಧ ಭೂಮಿಯ ಮುಂಚೂಣಿಯಲ್ಲಿ ಹೋರಾಡಲು ರಷ್ಯಾ ಬಲ ಕಳೆದುಕೊಂಡಿದೆ. ಅವರಿಂದ ಉಕ್ರೇನ್‌ನಲ್ಲಿ ಆಕ್ರಮಣಕ್ಕೆ ಮುನ್ನುಗ್ಗಲು ಸಾಧ್ಯವಾಗದು– ಉಕ್ರೇನ್‌ ಅಧ್ಯಕ್ಷೀಯ ಸಲಹೆಗಾರ ಒಲೆಕ್ಸಿ ಅರೆಸ್ಟೊವಿಕ್‌

*ರಷ್ಯಾ ಪರವಾಗಿ ಉಕ್ರೇನ್‌ ನೆಲದಲ್ಲಿ ಯುದ್ಧಮಾಡಲು ಸಿರಿಯಾ ಪಡೆಗಳು ಸಿದ್ಧ. ಪುಟಿನ್‌ ಅನುಮತಿಗೆ ಕಾಯುತ್ತಿದ್ದೇವೆ– ಸಿರಿಯಾ ಸಂಸದೀಯ ರಕ್ಷಾ ಪಡೆಗಳ ಕಮಾಂಡರ್‌ (ಎನ್‌ಡಿಎಫ್‌) ನಬಿಲ್‌ ಅಬ್ದಲ್ಲಾ ಹೇಳಿಕೆ

*ಅಣ್ವಸ್ತ್ರ ಪಡೆಯ ತಾಲೀಮನ್ನು ಬೇರೆ ದೇಶಕ್ಕೆ ಸ್ಥಳಾಂತರಿಸುವ ಪುಟಿನ್‌ ಯೋಜನೆಯ ರಹಸ್ಯವನ್ನು ತಮ್ಮ ಸೇನೆಯ ಉನ್ನತ ಜನರಲ್‌ ಒಬ್ಬರು ಬಹಿರಂಗಪಡಿಸಿದ್ದರಿಂದ ಪುಟಿನ್‌ ಹತಾಶರಾಗಿದ್ದು, ತಮ್ಮ ಕುಟುಂಬವನ್ನು ಸರ್ಬಿಯಾದ ಸುರಕ್ಷಿತ ಭೂಗತ ತಾಣಕ್ಕೆ ಕಳುಹಿಸಿದ್ದಾರೆ ಎಂದು ‘ದಿ ಡೈಲಿ ಮೇಲ್‌’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.