ADVERTISEMENT

ಉಕ್ರೇನ್‌ ಮೇಲೆ ಹೈಪರ್‌ಸಾನಿಕ್‌ ಕ್ಷಿಪಣಿ ದಾಳಿ: ನಾಲ್ವರು ಸಾವು

ಏಜೆನ್ಸೀಸ್
Published 8 ಜನವರಿ 2024, 14:13 IST
Last Updated 8 ಜನವರಿ 2024, 14:13 IST
<div class="paragraphs"><p>ಉಕ್ರೇನ್‌ನ ಕ್ರಿವಿ ರಿಹ್‌ ಪಟ್ಟಣದ ಮೇಲೆ ರಷ್ಯಾ ನಡೆಸಿರುವ ಕ್ಷಿಪಣಿ ದಾಳಿಯಲ್ಲಿ ಧ್ವಂಸಗೊಂಡಿರುವ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಣಾ ಸಿಬ್ಬಂದಿ ಸೋಮವಾರ ರಕ್ಷಿಸಿದರು</p></div>

ಉಕ್ರೇನ್‌ನ ಕ್ರಿವಿ ರಿಹ್‌ ಪಟ್ಟಣದ ಮೇಲೆ ರಷ್ಯಾ ನಡೆಸಿರುವ ಕ್ಷಿಪಣಿ ದಾಳಿಯಲ್ಲಿ ಧ್ವಂಸಗೊಂಡಿರುವ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಣಾ ಸಿಬ್ಬಂದಿ ಸೋಮವಾರ ರಕ್ಷಿಸಿದರು

   

– ಪಿಟಿಐ ಚಿತ್ರ

ಕೀವ್‌: ರಷ್ಯಾ ಸೇನೆಯು ಸೋಮವಾರ ನಸುಕಿನಲ್ಲಿ ಉಕ್ರೇನ್‌ನಾದ್ಯಂತ ಹೈಪರ್‌ಸಾನಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳ ಸುರಿಮಳೆಗರೆದಿದೆ. ಇದರಿಂದ ನಾಲ್ವರು ನಾಗರಿಕರು ಮೃತಪಟ್ಟಿದ್ದು, ಸುಮಾರು 30 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ADVERTISEMENT

ದೇಶದ ಕೇಂದ್ರ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಯುದ್ಧದ ಮುಂಚೂಣಿಯ ನೆಲೆಗಳ ಬಳಿ ಕ್ಷಿಪಣಿಗಳ ದಾಳಿಯಾಗಿದೆ. ನಗರದ ವಸತಿ ಪ್ರದೇಶಗಳು, ಶಾಪಿಂಗ್ ಮಾಲ್ ಸೇರಿ ಪ್ರಮುಖ ಸ್ಥಳಗಳು ದಾಳಿಗೆ ತುತ್ತಾಗಿವೆ ಎಂದು ಉಕ್ರೇನ್‌ ಅಧಿಕಾರಿಗಳು ತಿಳಿಸಿದ್ದಾರೆ.  

ನಿಪ್ರೊಪೆಟ್ರೊವ್‌ಸ್ಕ್‌ ಪ್ರದೇಶದ ಕ್ರಿವಿ ರಿಹ್‌ ನಗರದ ಹೊರಗೆ ಕ್ಷಿಪಣಿ ದಾಳಿಯಿಂದ ಮಹಿಳೆ ಸತ್ತಿದ್ದಾರೆ. ನೊವೊಮೊಸ್ಕೋವ್‌ಸ್ಕ್‌ ಪಟ್ಟಣದ ಮೇಲೆ ಕ್ಷಿಪಣಿ ಅಪ್ಪಳಿಸಿ 24 ಜನರಿಗೆ ಗಾಯಗಳಾಗಿವೆ. ದೇಶದ ಅಧ್ಯಕ್ಷ ಝೆಲೆನ್‌ಸ್ಕಿ ಅವರ ತವರು ಪಟ್ಟಣ ಕ್ರಿವಿ ರಿಹ್‌ನಲ್ಲಿ 20ಕ್ಕೂ ಹೆಚ್ಚು ಮನೆಗಳು ಮತ್ತು ಶಾಪಿಂಗ್ ಮಾಲ್‌ ಹಾನಿಗೊಂಡಿವೆ ಎಂದು ಪ್ರಾದೇಶಿಕ ಗವರ್ನರ್ ಸೆರ್ಹಿ ಲಿಸಾಕ್ ಹೇಳಿದ್ದಾರೆ.

ಹಾರ್ಕಿವ್‌ ನಗರಕ್ಕೆ ನಾಲ್ಕು ಕ್ಷಿಪಣಿಗಳು ಅಪ್ಪಳಿಸಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಹಲವು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಕೆರ್ಸಾನ್‌ ಪ್ರದೇಶದ ಮೇಲೆ ರಷ್ಯಾ ಸೈನಿಕರು 131 ಬಾರಿ ಶೆಲ್‌ ದಾಳಿ ನಡೆಸಿ, ಇಬ್ಬರನ್ನು ಕೊಂದಿದ್ದಾರೆ. ಖ್ಮೆಲ್‌ನಿಟ್‌ಸ್ಕಿ ಪ್ರದೇಶದಲ್ಲಿ ಬೆಳಿಗ್ಗೆ ಆರು ಬಾರಿ ಸ್ಫೋಟ ಸಂಭವಿಸಿದೆ. ಇಬ್ಬರು ನಾಗರಿಕರು ಹತರಾಗಿದ್ದಾರೆ. ಮತ್ತೊಂದು ಪ್ರಮುಖ ನಗರ ಝಪೊರಿಝಿಯಾದ ಮೇಲೂ ಕ್ಷಿಪಣಿ ದಾಳಿಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಕ್ಷಣಾ ಉದ್ಯಮ ದಾಳಿಯ ಗುರಿ:

22 ತಿಂಗಳ ಯುದ್ಧದಲ್ಲಿ, ಕಳೆದ ಬಾರಿಯ ಚಳಿಗಾಲದಲ್ಲಿ ಉಕ್ರೇನ್‌ನ ವಿದ್ಯುತ್‌ ಗ್ರಿಡ್‌ಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ರಷ್ಯಾ ಈ ಬಾರಿ ರಕ್ಷಣಾ ಉದ್ಯಮಗಳ ಮೇಲೆ ದಾಳಿ ಮಾಡುತ್ತಿದೆ. ಆದರೆ, ಕ್ಷಿಪಣಿಗಳು ಪದೇ ಪದೇ ನಾಗರಿಕ ಪ್ರದೇಶಗಳಿಗೆ ಅಪ್ಪಳಿಸುತ್ತಿವೆ ಎಂದು ಪಾಶ್ಚಿಮಾತ್ಯ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್‌ನಲ್ಲಿನ ಚಳಿಗಾಲದ ಪ್ರತಿಕೂಲ ವಾತಾವರಣದ ನಡುವೆ ಬಾಂಬ್‌ ದಾಳಿ ನಡೆಸುವ ತಂತ್ರದ ಭಾಗವಾಗಿ ರಷ್ಯಾ ಕ್ರೂಸ್‌ ಕ್ಷಿಪಣಿಗಳನ್ನು ಸಂಗ್ರಹಿಸುತ್ತಿದೆ ಎಂದು ಈ ಹಿಂದೆಯೇ ಅಧಿಕಾರಿಗಳು ಎಚ್ಚರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.