ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆ
(ರಾಯಿಟರ್ಸ್ ಚಿತ್ರ)
ಚಿಂಗ್ಡವ್: ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಸ್ಪಷ್ಟವಾದ ಉಲ್ಲೇಖ ಇಲ್ಲದ ಕಾರಣ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಜಂಟಿ ಹೇಳಿಕೆಯ ದಾಖಲೆಗೆ ಸಹಿ ಹಾಕಲು ಭಾರತ ನಿರಾಕರಿಸಿದೆ.
ಚೀನಾದ ಬಂದರು ನಗರ ಚಿಂಗ್ಡವ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾಗವಹಿಸಿದರು.
ಆದರೆ ಗಡಿಯಾಚೆ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಕುರಿತು ಭಾರತದ ಕಳವಳಗಳ ಕುರಿತು ಸ್ಪಷ್ಟವಾಗಿ ಉಲ್ಲೇಖಿಸದ ಕಾರಣ ಶಾಂಘೈ ಸಹಕಾರ ಸಂಘಟನೆಯ ಪ್ರಕಟಣೆಗೆ ಸಹಿ ಹಾಕದಿರಲು ರಾಜನಾಥ ಸಿಂಗ್ ನಿರ್ಧರಿಸಿದ್ದಾರೆ.
ಭಯೋತ್ಪಾದಕರು ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುವವರನ್ನು ಹೊಣೆಗಾರರನ್ನಾಗಿಸಬೇಕು ಎಂದು ಪಾಕಿಸ್ತಾನ ಗುರಿಯಾಗಿಸಿ ರಾಜನಾಥ ಸಿಂಗ್ ಹೇಳಿಕೆ ನೀಡಿದರು.
ಶಾಂಘೈ ಸಹಕಾರ ಸಂಘಟನೆ ಒಮ್ಮತದ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತದ ರಕ್ಷಣಾ ಸಚಿವರು ಜಂಟಿ ಹೇಳಿಕೆಯ ದಾಖಲೆಯನ್ನು ಅನುಮೋದಿಸಲು ನಿರಾಕರಿಸಿದ್ದರಿಂದ ಈ ಬಾರಿಯ ಸಭೆವು ಯಾವುದೇ ಅಧಿಕೃತ ಪ್ರಕಟಣೆಯಿಲ್ಲದೆ ಕೊನೆಗೊಂಡಿತು ಎಂದು ಬಲ್ಲ ಮೂಲಗಳು ತಿಳಿಸಿವೆ.
ಎಸ್‌ಸಿಒ ಸಭೆಯಲ್ಲಿ ಭಾರತ, ಚೀನಾ ಜತೆಗೆ ಪಾಕಿಸ್ತಾನ, ಇರಾನ್, ಕಜಕಿಸ್ತಾನ, ಕಿರ್ಗಿಸ್ತಾನ, ರಷ್ಯಾ, ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನದ ಪ್ರತಿನಿಧಿಗಳು ಭಾಗವಹಿಸಿದರು.
'ಭಯೋತ್ಪಾದನೆಯನ್ನು ಎದುರಿಸುವಲ್ಲಿ ಎರಡು ಮಾನದಂಡಗಳು ಇರಬಾರದು. ಎಸ್‌ಸಿಒ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ಈ ಬೆದರಿಕೆಯನ್ನು ಖಂಡಿಸಬೇಕು' ಎಂದು ರಾಜನಾಥ ಸಿಂಗ್ ತಮ್ಮ ಭಾಷಣದಲ್ಲಿ ಒತ್ತಾಯಿಸಿದರು.
'ಕೆಲವು ದೇಶಗಳು ಭಯೋತ್ಪಾದಕರಿಗೆ ಆಶ್ರಯ ನೀಡಲು ಗಡಿಯಾಚೆಗಿನ ಭಯೋತ್ಪಾದನೆಯನ್ನು ವಿಧಾನವಾಗಿ ಬಳಸುತ್ತಿವೆ. ಭಯೋತ್ಪಾದನೆ ಮತ್ತು ಶಾಂತಿ ಹಾಗೂ ಅಭಿವೃದ್ಧಿ ಒಟ್ಟಿಗೆ ಇರಲು ಸಾಧ್ಯವಿಲ್ಲ. ಹೆಚ್ಚುತ್ತಿರುವ ಮೂಲಭೂತವಾದ, ಉಗ್ರವಾದ ಮತ್ತು ಭಯೋತ್ಪಾದನೆ ಈ ಸಮಸ್ಯೆಗಳಿಗೆ ಕಾರಣವಾಗಿವೆ. ಈ ಎಲ್ಲ ಸವಾಲುಗಳನ್ನು ಎದುರಿಸಲು ಕಠಿಣ ಕ್ರಮದ ಅಗತ್ಯವಿದೆ. ಈ ಹೋರಾಟದಲ್ಲಿ ನಾವೆಲ್ಲರೂ ಒಂದಾಗಬೇಕು' ಎಂದು ಹೇಳಿದರು.
'ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯು ಲಷ್ಕರ್–ಎ–ತಯಬಾದ ಹಿಂದಿನ ದಾಳಿಗಳಿಗೆ ಹೊಂದಿಕೆಯಾಗುತ್ತದೆ. ಭಯೋತ್ಪಾದನೆ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ. ಭಯೋತ್ಪಾದನೆ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ಇದ್ದು, ಭಯೋತ್ಪಾದನಾ ಕೇಂದ್ರಗಳನ್ನು ಗುರಿಯಾಗಿಸಲು ಹಿಂಜರಿಯುವುದಿಲ್ಲ' ಎಂದು ಉಲ್ಲೇಖಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.