ಟಿಯಾನ್ ಜಿನ್‌ನಲ್ಲಿ ನಡೆದ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್
ಕೃಪೆ: ಪಿಎಂಒ
ಟಿಯಾನ್ ಜಿನ್: ಭಾರತ, ಚೀನಾ ಸ್ನೇಹಿತರಾಗಿರುವುದೇ ಉತ್ತಮ. ಗಡಿ ಸಮಸ್ಯೆಯು ದ್ವಿಪಕ್ಷೀಯ ಸಂಬಂಧವನ್ನು ವ್ಯಾಖ್ಯಾನಿಸಲು ಬಿಡಬಾರದು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಹೇಳಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವಾರ್ಷಿಕ ಶೃಂಗಸಭೆಯು ಟಿಯಾನ್ ಜಿನ್ ನಗರದಲ್ಲಿ ಇಂದಿನಿಂದ (ಭಾನುವಾರದಿಂದ) ಆರಂಭವಾಗಿದೆ. ಈ ವೇಳೆ ಷಿ ಹಾಗೂ ಮೋದಿ ಮಾತುಕತೆ ನಡೆಸಿದ್ದಾರೆ.
ಏಷ್ಯಾದ ನೆರೆಹೊರೆಯ ರಾಷ್ಟ್ರಗಳಾಗಿರುವ ಭಾರತ ಮತ್ತು ಚೀನಾ, ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವುದನ್ನು ಖಾತ್ರಿಪಡಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ಗಡಿ ಸಮಸ್ಯೆಯು ಎರಡೂ ದೇಶಗಳ ನಡುವಣ ಒಟ್ಟಾರೆ ಸಂಬಂಧವನ್ನು ವ್ಯಾಖ್ಯಾನಿಸಲು ಬಿಡಬಾರದು ಎಂದು ಈ ವೇಳೆ ಮೋದಿಗೆ ಷಿ ಹೇಳಿದ್ದಾರೆ.
ಭಾರತ ಮತ್ತು ಚೀನಾ ಪಾಲುದಾರ ರಾಷ್ಟ್ರಗಳೇ ಹೊರತು ಪ್ರತಿಸ್ಪರ್ಧಿಗಳಲ್ಲ. ಎರಡೂ ದೇಶಗಳು ಪರಸ್ಪರರಿಗೆ ಬೆದರಿಕೆಯಲ್ಲ. ಅಭಿವೃದ್ಧಿಗೆ ಪೂರಕ ಅವಕಾಶಗಳಾಗಿವೆ ಎಂದು ಪ್ರತಿಪಾದಿಸಿದ್ದಾರೆ.
ಸಮಗ್ರತೆಗೆ ಬದ್ಧವಾಗಿರುವವರೆಗೆ ಭಾರತ – ಚೀನಾ ದ್ವಿಪಕ್ಷೀಯ ಸಂಬಂಧ ದೀರ್ಘಕಾಲಿನ ಹಾಗೂ ಸ್ಥಿರ ಬೆಳವಣಿಗೆ ಸಾಧಿಸಲಿದೆ ಎಂದಿದ್ದಾರೆ.
'ಭಾರತ, ಚೀನಾ ಉತ್ತಮ ನೆರೆಹೊರೆ ರಾಷ್ಟ್ರಗಳಾಗುವುದು, ಸೌಹಾರ್ದಯುತ ಸಂಬಂಧ ಹೊಂದಿರುವ ಸ್ನೇಹಿತರಾಗುವುದು, ಪರಸ್ಪರರ ಯಶಸ್ಸಿಗೆ ಪೂರಕ ಪಾಲುದಾರರಾಗುವುದು ಮತ್ತು ಡ್ರ್ಯಾಗನ್, ಆನೆ ಒಂದಾಗುವುದು ಸರಿಯಾದ ಆಯ್ಕೆಯಾಗಲಿದೆ' ಎಂದು ಒತ್ತಿ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಆರಂಭಿಸಿರುವ ಸುಂಕ ಸಮರವು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಉಂಟುಮಾಡಿದೆ. ಇದೇ ಹೊತ್ತಿನಲ್ಲಿ ಷಿ ಮತ್ತು ಮೋದಿ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.