ADVERTISEMENT

ಶಾಂಘೈ: ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶ, ಲಾಕ್‌ಡೌನ್

ಫಲಿತಾಂಶ ಬರುವವರೆಗೆ ಮನೆಯಿಂದ ಹೊರಬರದಂತೆ ಜನರಿಗೆ ನಿರ್ಬಂಧ

ಏಜೆನ್ಸೀಸ್
Published 28 ಅಕ್ಟೋಬರ್ 2022, 11:09 IST
Last Updated 28 ಅಕ್ಟೋಬರ್ 2022, 11:09 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಬೀಜಿಂಗ್: ಶಾಂಘೈನ ಯಾಂಗ್‌ಪು ಜಿಲ್ಲೆಯಲ್ಲಿ ಶುಕ್ರವಾರ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಿದ್ದು, ಪರೀಕ್ಷೆಯ ಫಲಿತಾಂಶ ಬರುವವರೆಗೆ ಜಿಲ್ಲೆಯ 13 ಲಕ್ಷ ನಿವಾಸಿಗಳು ಮನೆಯಿಂದ ಹೊರಹೋಗದಂತೆ ನಿರ್ಬಂಧ ವಿಧಿಸಲಾಗಿದೆ.

ಶಾಂಘೈನ ಪೂರ್ವದಿಂದ ಟಿಬೆಟ್‌ವರೆಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಲಾಕ್‌ಡೌನ್‌ ಅನ್ನು ವಿರೋಧಿಸಿ ಕೆಲವೆಡೆ ಪ್ರತಿಭಟನೆಗಳು ನಡೆದ ವರದಿಯಾಗಿದೆ.

ಚೀನಾದಲ್ಲಿ ಶುಕ್ರವಾರ 1,337 ಕೋವಿಡ್‌ನ ಹೊಸ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಬಹುತೇಕವು ಲಕ್ಷಣರಹಿತವಾಗಿವೆ. ಯಾವುದೇ ಸಾವುಗಳೂ ವರದಿಯಾಗಿಲ್ಲ. ಶಾಂಘೈನಲ್ಲಿ 11 ಲಕ್ಷಣರಹಿತ ಪ್ರಕರಣಗಳು ವರದಿಯಾಗಿವೆ. ಟೆಬೆಟ್‌ನಲ್ಲಿ 6 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಐದು ಪ್ರಕರಣಗಳು ಲಕ್ಷಣರಹಿತವಾಗಿವೆ.

ADVERTISEMENT

2019ರ ಕೊನೆಯಲ್ಲಿ ವುಹಾನ್‌ ನಗರದಲ್ಲಿ ಮೊದಲ ಬಾರಿಗೆ ಕೋವಿಡ್‌ ಪ್ರಕರಣ ಪತ್ತೆಯಾದಾಗಿನಿಂದ ಇದುವರೆಗೆ ಒಟ್ಟು 2,58,660 ಪ್ರಕರಣಗಳು ವರದಿಯಾಗಿದ್ದು, 5,226 ಮಂದಿ ಸಾವಿಗೀಡಾಗಿದ್ದಾರೆ ಎಂದು ಚೀನಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.