
ಢಾಕಾ: ಬಾಂಗ್ಲಾದೇಶದಲ್ಲಿ 2024ರ ಜುಲೈನಲ್ಲಿ ನಡೆದ ವಿದ್ಯಾರ್ಥಿ ದಂಗೆಯ ವೇಳೆ ರಾಷ್ಟ್ರ ರಾಜಧಾನಿ ಢಾಕಾದಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಪೊಲೀಸರು ದಾಖಲಿಸಿರುವ ಆರೋಪ ಪಟ್ಟಿಯಲ್ಲಿ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ 25 ಜನರ ಹೆಸರನ್ನು ಸೇರಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಲಭ್ಯವಿರುವ ಮಾಹಿತಿ ಪ್ರಕಾರ, ಢಾಕಾದ ಪ್ರಗತಿ ಸರಾನಿ ಪ್ರದೇಶದಲ್ಲಿ 2024ರ ಜುಲೈ 19ರಂದು ಸರ್ಕಾರದ ವಿರುದ್ಧ ನಡೆಯುತ್ತಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ವೇಳೆ ಅಬುಜರ್ ಶೇಖ್ ಎಂಬವರ ಮೇಲೆ ಗುಂಡು ಹಾರಿಸಲಾಗಿತ್ತು. ಅವರು, ಢಾಕಾ ಮೆಟ್ರೋಪಾಲಿಟನ್ ಆಸ್ಪತ್ರೆಯಲ್ಲಿ ಜುಲೈ 27ರಂದು ಮೃತಪಟ್ಟರು ಎನ್ನಲಾಗಿದೆ.
ಈ ಪ್ರಕರಣದಲ್ಲಿ ಹಸೀನಾ, ಮಾಜಿ ಸಚಿವ ಅಬೈದುಲ್ ಖ್ವಾದೆರ್ ಮತ್ತು ಅಸಾದುಜ್ಜಮಾನ್ ಖಾನ್ ಕಮಲ್ ಸೇರಿದಂತೆ 25 ಮಂದಿಯ ವಿರುದ್ಧ ಭಯೋತ್ಪಾದನೆ ನಿಗ್ರಹ ಘಟಕ (ಎಟಿಯು) ಆರೋಪಪಟ್ಟಿ ದಾಖಲಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ 'ಬಿಎಸ್‌ಎಸ್' ವರದಿ ಮಾಡಿದೆ.
ಹಸೀನಾ ಅವರ ಅವಾಮಿ ಲೀಗ್ ಹಾಗೂ ಅದರ ಯುವ ಘಟಕ ಜುಬೊ ಲೀಗ್‌ನ ಸ್ಥಳೀಯ ನಾಯಕರು ಪ್ರತಿಭಟನಾಕಾರರತ್ತ ಗುಂಡು ಹಾರಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ದೂರಲಾಗಿದೆ.
ಅಬುಜರ್ ಶೇಖ್ ಅವರ ತಾಯಿ ಚೋಬಿ ಖಾತುನ್ ಅವರು 2024ರ ನವೆಂಬರ್ 16ರಂದು ಗುಲ್ಶಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರಂಭದಲ್ಲಿ, ಒಟ್ಟು 27 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು.
ಹಸೀನಾ ಅವರು 2024ರ ಆಗಸ್ಟ್ 5ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಸರ್ಕಾರ ಪತನವಾಗಿತ್ತು. ಆ ನಂತರ, ಅವರ ದೇಶದಿಂದ ಪಲಾಯನ ಮಾಡಿದ್ದರು. ಇದರೊಂದಿಗೆ, ರಾಷ್ಟ್ರವ್ಯಾಪಿ ನಡೆಯುತ್ತಿದ್ದ ಪ್ರತಿಭಟನೆಯೂ ಅಂತ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.