ADVERTISEMENT

ಕರ್ತಾರಪುರ ಸಾಹಿಬ್‌ಗೆ ಚಿನ್ನದ ಡೋಲಿ ಸಮರ್ಪಣೆ

ಪಿಟಿಐ
Published 5 ನವೆಂಬರ್ 2019, 19:45 IST
Last Updated 5 ನವೆಂಬರ್ 2019, 19:45 IST
   

ಲಾಹೋರ್‌: ಕರ್ತಾರಪುರ ಕಾರಿಡಾರ್‌ ಉದ್ಘಾಟನೆಗೆ ಕೆಲವೇ ದಿನಗಳಿರುವಾಗಲೇ ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್‌ ಭಕ್ತರು ‍ಪಾಕಿಸ್ತಾನದ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಭೇಟಿ ನೀಡಿದ್ದು, ಚಿನ್ನದ ಡೋಲಿ (ಪಲ್ಲಕ್ಕಿ) ಸಮರ್ಪಿಸಿದ್ದಾರೆ.

ಸಿಖ್‌ ಧರ್ಮ ಸಂಸ್ಥಾಪಕ ಗುರು ನಾನಕ್‌ ದೇವ್‌ ಅವರ 550ನೇ ಜನ್ಮ ದಿನೋತ್ಸವದಲ್ಲಿ ಪಾಲ್ಗೊಳ್ಳಲು 1,100ಕ್ಕೂ ಅಧಿಕ ಸಿಖ್‌ ಭಕ್ತರು ಪಾಕಿಸ್ತಾನಕ್ಕೆ ಬಂದಿದ್ದಾರೆ. ಪಂಜಾಬ್‌ ರಾಜ್ಯಪಾಲ ಚೌಧರಿ ಸರ್ವಾರ್‌ ನೇತೃತ್ವದಲ್ಲಿ ಸಿಖ್‌ ಯಾತ್ರಿಕರು ಚಿನ್ನದ ಡೋಲಿ ಸಮರ್ಪಿಸಿದರು.

‘ಕರ್ತಾರಪುರ ಕಾರಿಡಾರ್‌ ಅನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗಿದೆ. ಈ ಕಾರಿಡಾರ್‌ನಿಂದ ಉಭಯ ರಾಷ್ಟ್ರಗಳು ಮತ್ತಷ್ಟು ಹತ್ತಿರವಾಗಲಿವೆ’ ಎಂದು ಸರ್ವಾರ್‌ ಹೇಳಿದರು.

ADVERTISEMENT

ಭಾರತದ ಸಿಖ್‌ರನ್ನು ಹೊರತುಪಡಿಸಿ, ವಿದೇಶಗಳಿಂದ ಬರುವ ಯಾತ್ರಿಕರಿಗೆ ಆಂತರಿಕ ಸಚಿವಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯುವುದನ್ನು ಪಾಕಿಸ್ತಾನ ಸರ್ಕಾರ ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಕರ್ತಾರಪುರ ಕಾರಿಡಾರ್‌ ಅನ್ನು ನವೆಂಬರ್‌ 9 ರಂದು ಪ್ರಧಾನಿ ಇಮ್ರಾನ್‌ ಖಾನ್‌ ಉದ್ಘಾಟಿಸಲಿದ್ದಾರೆ.

ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್‌ ಅವರು ತಮ್ಮ ಕೊನೆಯ ದಿನಗಳನ್ನು ಕರ್ತಾರಪುರದಲ್ಲೇ ಕಳೆದಿದ್ದರು. ಭಾರತದ ಗುರುದಾಸ್‌ಪುರದಲ್ಲಿರುವ ಡೇರಾ ಬಾಬಾ ನಾನಕ್‌ ಗುರುದ್ವಾರ ಹಾಗೂ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ನೇರವಾಗಿ ತೆರಳಲು ಈ ಯೋಜನೆ ಕೈಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.