ಸುಟ್ಟು ಕರುಕಲಾಗಿರುವ ವಿಮಾನ
ರಾಯಿಟರ್ಸ್ ಚಿತ್ರ
ಸಿಯೊಲ್: ಸಂಸ್ಥೆಯ ವಿಮಾನವು ದಕ್ಷಿಣ ಕೊರಿಯಾದ ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಅಪಘಾತಕ್ಕೀಡಾದ ಬಗ್ಗೆ 'ಜೆಜು ಏರ್' ಕ್ಷಮೆ ಯಾಚಿಸಿದೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ಬಂದ ವಿಮಾನ, ಲ್ಯಾಂಡ್ ಆಗುವ ವೇಳೆ ರನ್‌ವೇಯಿಂದ ಜಾರಿ ಗೋಡೆಗೆ ಡಿಕ್ಕಿಯಾಗಿದೆ. ಪರಿಣಾಮವಾಗಿ, ವಿಮಾನದಲ್ಲಿದ್ದ 120ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
175 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿ ವಿಮಾನದಲ್ಲಿದ್ದರು. ಇಬ್ಬರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ.
ದುರಂತದ ಬೆನ್ನಲ್ಲೇ ಜೆಜು ಏರ್ ಸಂಸ್ಥೆ, 'ಮುಯಾನ್ ವಿಮಾನ ದುರಂತದಿಂದ ಸಂಕಷ್ಟಕ್ಕೀಡಾದ ಪ್ರತಿಯೊಬ್ಬರಲ್ಲಿಯೂ ಕ್ಷಮೆ ಕೋರುತ್ತೇವೆ. ರಕ್ಷಣಾ ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದ್ದೇವೆ. ದುರ್ಘಟನೆಯ ಬಗ್ಗೆ ವಿಷಾಧಿಸುತ್ತೇವೆ' ಎಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಸಂಸ್ಥೆಯ ಸಿಇಒ ಕಿಮ್–ಇ ಬೇ ಹಾಗೂ ಇತರ ಅಧಿಕಾರಿಗಳು ಶಿರಭಾಗಿ ಕ್ಷಮೆ ಕೋರಿದ್ದಾರೆ.
ಸಂತ್ರಸ್ತರ ಕುಟುಂಬದವರಿಗೆ ನೆರವಾಗುವ ಸಲುವಾಗಿ, ವಿಮಾನ ನಿಲ್ದಾಣವಿದ್ದ ಜಿಯೊಲ್ಲನಮ್–ಡೊ ಪ್ರಾಂತ್ಯದಲ್ಲಿ ತಾತ್ಕಾಲಿಕವಾಗಿ ವಿಶೇಷ ರೈಲು ಕಾರ್ಯಾಚರಣೆ ಆರಂಭಿಸುವುದಾಗಿ ಕೋರಿಯಾ ರೈಲ್ವೆ ತಿಳಿಸಿದೆ.
ಇಂದು ಮಧ್ಯಾಹ್ನ 3.30ಕ್ಕೆ ಸಿಯೊಲ್‌ನಿಂದ ಹೊರಡಲಿರುವ ರೈಲು, ಗ್ವಾಂಗ್ಮೆಯಿಯಾಂಗ್, ಒಸಾಂಗ್, ಇಕ್ಸಾನ್, ನಾಜು ಮತ್ತು ಮಕ್ಪೊ ನಿಲ್ದಾಣಗಳಲ್ಲಿ ಸಂಚರಿಸಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.